ಜಿಲ್ಲಾ ಸುದ್ದಿ

ಜಾತಿ ಗಣತಿಗೆ ವಿರೋಧ ಸಲ್ಲ

ಬೆಂಗಳೂರು: ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯಗಳು ಹಂಚಿಕೆಯಾಗಬೇಕಾದರೆ, ರಾಜ್ಯದಲ್ಲಿ ಜಾತಿ ಗಣತಿ ಅನಿವಾರ್ಯ ಎಂದು ಹಲವು ಸಾಹಿತಿಗಳನ್ನೊಳಗೊಂಡ ಸಮಾನ ಸಮಾಜ ವೇದಿಕೆ ಪ್ರತಿಪಾದಿಸಿದೆ. ಇದೇ ವೇಳೆ, ಜಾತಿವಾರು ಸಮೀಕ್ಷೆಗೆ ಕೆಲವು ಪ್ರಬಲ ಸಮುದಾಯಗಳಿಂದ ವ್ಯಕ್ತವಾದ ವಿರೋಧಕ್ಕೆ ಅದು ತೀಕ್ಷ್ಣವಾಗಿ ಪ್ರತಿಕ್ರಿಯಿ ಸಿದ್ದು, ಜಾತಿ ಗಣತಿ ವಿರೋಧಿಸುವವರು ಸಂವಿಧಾನದ ಆಶಯಗಳನ್ನು ಅರಿತುಕೊಂಡು ಎಚ್ಚರಿಕೆಯಿಂದ ಮಾತನಾಡಲಿ ಎಂದು ತಿರುಗೇಟು ನೀಡಿದೆ.

`ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ' ಕುರಿತು ವೇದಿಕೆಯು ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಹಲವು ಗಣ್ಯರು, ಜಾತಿ ಗಣತಿ ಯಾವುದೇ ಸಮುದಾಯದ ವಿರುದ್ಧವಾದುದಲ್ಲ. ಯಾರೂ ಆತಂಕ ಪಡಬಾರದು ಎಂದು ಮನವಿ ಮಾಡಿದರು. ವಿಚಾರ ಸಂಕಿರಣವನ್ನು ಉದ್ಘಾಟಿಸಿದ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಜಾತಿ ಸಮೀಕ್ಷೆ ಕುರಿತಾಗಿ ತಪ್ಪು ಕಲ್ಪನೆ ಮತ್ತು ಅನುಮಾನಗಳು ಮೂಡುತ್ತಿವೆ. ಜಾತಿ ಗಣತಿಯನ್ನು ಅಪವ್ಯಾಖ್ಯಾನ ಮಾಡಲಾ ಗುತ್ತಿದೆ ಎಂದು ವಿಷಾದಿಸಿದರಲ್ಲದೆ, ದಲಿತರು, ಶೋಷಿತರು ಜಾಗೃತರಾಗುವ ಹೊತ್ತಿಗೆ ಮೇಲ್ವರ್ಗದ ಜನರು ಆತಂಕಕ್ಕೆ ಒಳಗಾಗುತ್ತಾರೆ. ಜಾತಿ ಗಣತಿ ವಾಸ್ತವದಲ್ಲಿ ಯೋರ ವಿರುದ್ಧವೂ ಅಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡ ಬೇಕಾಗಿದೆಯಾದರೂ, ಪ್ರಜ್ಞಾಪೂರ್ವಕವಾಗಿ ವಿರೋಧ ವ್ಯಕ್ತಪಡಿಸುವವರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದರು.

ಸರ್ಕಾರ ನಡೆಸಲುದ್ದೇಶಿಸಿರುವುದು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಾಗಿದೆ. ಇದು ಅತ್ಯಂತ ವೈಜ್ಞಾನಿಕವಾಗಿ ನಡೆಯುತ್ತಿದೆ. ತಪ್ಪು ಕಲ್ಪನೆಗಳಿಂದ ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ದೇಶದ ಇತಿಹಾಸದ ಉದ್ದಕ್ಕೂ ತಳ ಸಮುದಾಯಗಳ ಮೇಲೆ ಪ್ರಹಾರ ನಡೆಯುತ್ತಲೇ ಬಂದಿದೆ. ಈಗಲೂ ಅದು ಮುಂದುವರಿದಿದೆ. ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಕೆಲವು ಶಕ್ತಿಗಳು ಜಾತಿ ರಾಜಕಾರಣದಲ್ಲಿ ಕ್ರಿಯಾಶೀಲವಾಗಿವೆ. ಜಾತಿ ಗಣತಿಯಿಂದ ಜಾತಿಗಳನ್ನು ಒಡೆಯುವ ಹುನ್ನಾರ ನಡೆದಿದೆ ಎಂದು ಹುಯಿಲೆಬ್ಬಿಸಿವೆ ಎಂದು ದೂರಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು, ಜಾತಿ ಗಣತಿಯಿಂದ ಯಾರಿಗೂ ಅನ್ಯಾಯವಾಗದು. ಯಾರೂ ಆತಂಕ ಪಡಬೇಕಿಲ್ಲ ಎಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಸ್ವಾಗತಿಸಿದರು. ವೇದಿಕೆಯ ಮುಖಂಡ ಜೆ. ಶ್ರೀನಿವಾಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವ ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪುಟ್ಟಸ್ವಾಮಿ, ಡಾ. ಜಯಮಾಲಾ, ದಸಂಸ ಮುಖಂಡರಾದ ಇಂದೂಧರ ಹೊನ್ನಾಪುರ, ಮಾವಳ್ಳಿ ಶಂಕರ್, ಪ್ರತಾಪ್ ಬಹುರೂಪಿ, ಮಾಜಿ ಶಾಸಕ ಭೂಪತಿ, ಪ್ರೊ. ಜಾಫಟ್ ಹಾಜರಿದ್ದರು.

SCROLL FOR NEXT