ಬೆಂಗಳೂರು: ಆಸ್ಪತ್ರೆಯಲ್ಲಿ ಮೃತಪಡುವ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಖಂಡಿಸಿ ಭಾರತೀಯ ವೈದ್ಯ ಸಂಘದ ಸದಸ್ಯರು ಸೋಮವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ರೋಗಿ ಆಕಸ್ಮಿಕವಾಗಿ ಮರಣ ಹೊಂದಿದರೂ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯ ಪೀಠೋಪಕರಣಗಳನ್ನು ಧ್ವಂಸ ಮಾಡುತ್ತಾರೆ. ಈ ವರ್ತನೆಯನ್ನು ಸಂಘವು ಖಂಡಿಸುತ್ತದೆ. ವೈದ್ಯರು ಎಂದಿಗೂ ರೋಗಿಯ ಹಿತ ಬಯಸುತ್ತಾರೆ, ಯಾವತ್ತೂ ತೊಂದರೆ ನೀಡುವುದಿಲ್ಲ.
ವೈದ್ಯರ ಸೇವೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರತಿಭಟನಕಾರರು ಅಭಿಪ್ರಾಯಪಟ್ಟರು. ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂ ಸಂಘದ ಅಧ್ಯಕ್ಷ ಹಾಗೂ ಭಾರತೀಯ ವೈದ್ಯ ಸಂಘದ ಸದಸ್ಯ ಡಾ.ನಾಗೇಂದ್ರ ಸ್ವಾಮಿ ಮಾತನಾಡಿ, ಪ್ರತಿಭಟನೆಯಲ್ಲಿ ನಾನಾ ಜಿಲ್ಲೆಗಳ ವೈದ್ಯರ ಸಂಘಗಳ ಸದಸ್ಯರು ಭಾಗವಹಿಸಿದ್ದಾರೆ. ಆದರೆ, ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ ಎಂದರು.
ಇಂತಹ ವಿಧ್ವಂಸಕ ಕೃತ್ಯಗಳಿಂದ ವೈದ್ಯರನ್ನು ಸರ್ಕಾರ ರಕ್ಷಿಸಬೇಕಿದೆ. ಅದಕ್ಕಾಗಿ `ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಆಸ್ಪತ್ರೆಗೆ ಹಾನಿ ತಡೆ ಕಾಯ್ದೆ 2009'ನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಕಾಯ್ದೆ ಪ್ರಕಾರ ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರನ್ನು ಶೀಘ್ರವಾಗಿ ಬಂಧಿಸಬೇಕು. ಅಂತಹವರಿಗೆ 2 ವರ್ಷ ಶಿಕ್ಷೆ ಆಗಬೇಕು. ಆಸ್ಪತ್ರೆಗೆ ಆದ ಹಾನಿಯನ್ನು ಆರೋಪಿಗಳೇ ಭರಿಸಬೇಕು ಎಂದು ಒತ್ತಾಯಿಸಿದರು. ವೈದ್ಯರ ಮೇಲೆ ಹಲ್ಲೆ ಮಾಡುವವವರ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದನ್ನು ಇದೇ ವೇಳೆ ಖಂಡಿಸಿದರು. ನೂರಾರು ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.