ವಿಧಾನಪರಿಷತ್ತು: ರಾಜ್ಯದಲ್ಲಿ ಐಎಎಸ್ ಶ್ರೇಣಿ ಅಧಿಕಾರಿಗಳ ಕೊರತೆ ಶೇ.35ರಷ್ಟಿದ್ದರೆ, ಕೆಎಎಸ್ ಅಧಿಕಾರಿಗಳ ಕೊರತೆ ಶೇ.56ರಷ್ಟು ಇದೆ ಎಂದು ಸರ್ಕಾರ ಹೇಳಿಕೊಂಡಿದೆ.
ಬಿಜೆಪಿ ಸದಸ್ಯ ಅರುಣ್ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಯವರು, 2014ರ ಜನವರಿ 22ರಂದು ಕೇಂದ್ರ ಸರ್ಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ರಾಜ್ಯದ ಭಾರತೀಯ ಆಡಳಿತ ಸೇವೆಗೆ ಒಟ್ಟು 314 ವೃಂದ ಬಲ ನಿಗದಿಪಡಿಸಿದೆ. ಮಂಜೂರಾದ 314 ಬಲದ ಪೈಕಿ 232 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, 82 ಅಧಿಕಾರಿಗಳ ಕೊರತೆ ಇದೆ ಎಂದು ವಿವರಿಸಿದ್ದಾರೆ. ಮಂಜೂರಾದ 214 ಹುದ್ದೆಗಳ ಪೈಕಿ 171 ಸೀನಿಯರ್ ಡ್ಯೂಟಿ ಪೋಸ್ಟ್ ಗಳಿದ್ದು, (ವೃಂದ ಹುದ್ದೆಗಳು) ಇವುಗಳಲ್ಲಿ 135 ವೃಂದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ಅಧಿಕಾರಿಗಳ ಕೊರತೆ ಯಿಂದ ಸುಮಾರು 16 ಹುದ್ದೆಗಳಿಗೆ ವೃಂದೇತರ ಅಧಿಕಾರಿಗಳನ್ನು ನೇಮಿಸಲಾಗಿದೆ.
20 ಹುದ್ದೆಗಳನ್ನು ಹೆಚ್ಚುವರಿ- ಸಮವರ್ತಿತ ಪ್ರಭಾರ ವ್ಯವಸ್ಥೆ ಮಾಡುವ ಮೂಲಕ ನಿರ್ವಹಿಸಲಾಗುತ್ತಿದೆ. ಇನ್ನು ಕರ್ನಾಟಕ ಆಡಳಿತ ಸೇವೆಯಲ್ಲಿ ಒಟ್ಟು 590 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಈ ಹುದ್ದೆಗಳ ಪೈಕಿ 254 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, 336 ಹುದ್ದೆಗಳು ಖಾಲಿ ಇವೆ. ಅಂದರೆ ಶೇ.55ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಕೆಎಎಸ್ ಕಿರಿಯ ಶ್ರೇಣಿ 315 ಹುದ್ದೆ ಸೃಜನೆಯಾಗಿದ್ದು, 183 ಖಾಲಿ ಇವೆ. ಹಿರಿಯ ಶ್ರೇಣಿಯಲ್ಲಿ 135 ಹುದ್ದೆಯ ಪೈಕಿ 49 ಖಾಲಿ ಇವೆ. ಕೆಎಎಸ್ ಆಯ್ಕೆ ಶ್ರೇಣಿಯಲ್ಲಿ 80 ಹುದ್ದೆ ಇದ್ದು 76 ಹುದ್ದೆಗಳು ಖಾಲಿ ಇದ್ದರೆ, ಸೂಪರ್ ಟೈಮ್ ಸ್ಕೇಲ್‍ನ 55 ಹುದ್ದೆ ಪೈಕಿ 28 ಖಾಲಿ ಇವೆ. ಸೀನಿಯರ್ ಸೂಪರ್ ಟೈಮ್ ಸ್ಕೇಲ್‍ನಲ್ಲಿ 5 ಹುದ್ದೆ ಸೃಜನೆಯಾಗಿದ್ದು, ಯಾರೂ ಸಹ ಇಲ್ಲ.
ಹುದ್ದೆ ತುಂಬಲು ಪ್ರಯತ್ನ
ಐಎಎಸ್ ಅಧಿಕಾರಿಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನೇರ ನೇಮಕಾತಿ ಅಡಿಯಲ್ಲಿ ಪ್ರತಿ ವರ್ಷ 10ರಿಂದ 15 ಅಧಿಕಾರಿಗಳನ್ನು ರಾಜ್ಯ ಸರ್ಕಾರಕ್ಕೆ ಹಂಚಿಕೆ ಮಾಡುವಂತೆ ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯನ್ನು ಸರ್ಕಾರ ಕೋರಿದೆ. ಕೇಂದ್ರ ಸರ್ಕಾರ 2009ನೇ ಸಾಲಿನಿಂದ 2014ನೇ ಸಾಲಿನವರೆಗೆ ಪ್ರತಿ ವರ್ಷ 8 ಅಧಿಕಾರಿಗಳನ್ನು ರಾಜ್ಯ ಸರ್ಕಾರಕ್ಕೆ ಹಂಚಿಕೆ ಮಾಡಿದೆ.
ರಾಜ್ಯ ಸಿವಿಲ್ ಸೇವೆಯಿಂದ ಐಎಎಸ್ ವೃಂದಕ್ಕೆ ಬಡ್ತಿಗೆ ಸಂಬಂಧಿಸಿದಂತೆ 2013ನೇ ಸಾಲಿನವರೆಗೆ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ರಾಜ್ಯ ಸಿವಿಲ್ ಸೇವೆಯೇತರ ವೃಂದದಿಂದ ಐಎಎಸ್ ವೃಂದಕ್ಕೆ 2013ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ವಿಭಾಗದಲ್ಲಿ ಕೆಎಎಸ್ (ಕಿರಿಯ ಶ್ರೇಣಿ)ಯ 60 ಹುದ್ದೆಗಳನ್ನು ನೇಮಕಾತಿಗಾಗಿ ಅಧಿಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಉತ್ತರದಲ್ಲಿ ವಿವರಿಸಿದ್ದಾರೆ.