ವಿಧಾನಪರಿಷತ್ತು: ನಗರದ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ವಿರುದ್ಧ ಬಿಜೆಪಿ ಸದಸ್ಯ ಗಣೇಶ್ ಕಾರ್ಣಿಕ್ ಹಕ್ಕುಚ್ಯುತಿ ಮಂಡಿಸಿದ್ದಾರೆ.
ಡಿ.ಕೆ.ರವಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತ ರೆಡ್ಡಿ ನೀಡಿರುವ ಹೇಳಿಕೆಯಿಂದ ಸದಸ್ಯರ ಹಕ್ಕುಚ್ಯುತಿಯಾಗಿದೆ ಎಂದು ಕಾರ್ಣಿಕ್ ಸದನದಲ್ಲಿ ಪ್ರಸ್ತಾಪಿಸಿದರು. ರವಿ ಸಾವಿನ ಬಗ್ಗೆ ಅನುಮಾನಗಳಿದ್ದು, ಸಿಬಿಐ ತನಿಖೆಯಾಗಬೇಕೆಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಸದನದಲ್ಲಿ ಹೇಳಿದ್ದರು. ಇದಕ್ಕೆ ವಿರುದ್ಧವಾಗಿ ರೆಡ್ಡಿ ಮಾತನಾಡಿದ್ದಾರೆ , ಅವರ ವಿರುದ್ಧ ಕ್ರಮವಾಗಲಿ ಎಂದರು. ಬಿಜೆಪಿ ಸಿದ್ದರಾಮಣ್ಣ, ಎಂ.ಎನ್.ರೆಡ್ಡಿಈಶ್ವರಪ್ಪ ಅವರನ್ನೇ ನೇರವಾಗಿ ಟೀಕಿಸುವ ಮಾದರಿಯಲ್ಲಿ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹಕ್ಕು ಬಾಧ್ಯತಾ ಸಮಿತಿಗೆ ವಹಿಸದೆ ಸದನದಲ್ಲೇ ಚರ್ಚಿಸಿ ನಿರ್ಧ ರಿಸಬೇಕು ಎಂದರು.
ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್‍ನ ಮೋಟಮ್ಮ, ಎಂ.ಎನ್. ರೆಡ್ಡಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ ಸದನದಲ್ಲಿ ಚರ್ಚೆಯಾಗಿರುವುದನ್ನೂ ಪ್ರಸ್ತಾಪಿಸಿಲ್ಲ. ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಸಹಜವಾಗಿ ಪ್ರತಿಕ್ರಿಯಿಸಿದ್ದಾರೆ. ಆದ್ದರಿಂದ ಇದು ಹಕ್ಕುಚ್ಯುತಿಯಲ್ಲ ಎಂದರು. ಆಗ ಬಿಜೆಪಿಯ ಕೆ.ಬಿ.ಶಾಣಪ್ಪ, ರೆಡ್ಡಿ ಮಾಧ್ಯಮಗಳಲ್ಲಿ ಮಾತನಾಡಿರು ವುದನ್ನು ಎಲ್ಲರೂ ನೋಡಿದ್ದಾರೆ. ಆದ್ದರಿಂದ ಆ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಬೇಕು ಎಂದರು. ಇದನ್ನು ಒಪ್ಪದ ಕಾಂಗ್ರೆಸ್ ವೀರಣ್ಣ ಮತ್ತಿಕಟ್ಟಿ, ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗಳನ್ನು ಹಕ್ಕುಚ್ಯುತಿ ಎನ್ನುವುದು ಕಷ್ಟ. ಆದ್ದರಿಂದ ಅವರು ಹೇಳಿಕೆ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಆಗ ಸಭಾಪತಿ ಪೀಠದಲ್ಲಿದ್ದ ಪುಟ್ಟಣ್ಣ, ಎಂ.ಎನ್.ರೆಡ್ಡಿ ಹಕ್ಕುಚ್ಯುತಿ ಆಗುವಂಥ ಹೇಳಿಕೆ ನೀಡಿದ್ದಾರೆ ಎನ್ನುವುದಕ್ಕೆ ದಾಖಲೆ ಮತ್ತು ಸಾಕ್ಷ್ಯಗಳನ್ನು ಒದಗಿಸಿ, ಅದನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದರು. ಅಷ್ಟಕ್ಕೆ ಹಕ್ಕುಚ್ಯುತಿ ಚರ್ಚೆಗೆ ತಾತ್ಕಾಲಿಕ ತೆರೆ ಬಿತ್ತು.