ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಲುವಂತೆ ಒತ್ತಾಯಿಸಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಇದೇ ಮಾರ್ಚ್ 26 ಮತ್ತು 27ರಂದು ರಾಜ್ಯವ್ಯಾಪಿ ಬಂದ್ ಕರೆ ನೀಡಿದ್ದು, ಈ 2 ದಿನಗಳ ಕಾಲ ಮದ್ಯ ಮಾರಾಟ ಸಂಪೂರ್ಣವಾಗಿ ಬಂದ್ ಆಗಿರಲಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಾದವ ಅವರು, ರಾಜ್ಯ ಸರ್ಕಾರ ಮದ್ಯ ಮಾರಾಟದ ಮೇಲಿನ ವ್ಯಾಟ್ ರದ್ದುಗೊಳಿಸಬೇಕು, ವರ್ಷಕ್ಕೊಮ್ಮೆ ಪರವಾನಗಿ ನವೀಕರಣಕ್ಕೆ ಕಟ್ಟುವ ತೆರಿಗೆ, ಮಾರಾಟಗಾರರು ಮದ್ಯ ಖರೀದಿ ಮತ್ತು ಮಾರಾಟಕ್ಕೆ ಕಟ್ಟುವ ತೆರಿಗೆ ಮುಂತಾದ ಅವೈಜ್ಞಾನಿಕ ತೆರಿಗೆಗಳನ್ನು ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಈ ಬಂದ್ ನಡೆಸುತ್ತಿರುವುದಾಗಿ ಹೇಳಿದರು. ಅಲ್ಲದೆ ಮಾರ್ಚ್ 31ರಂದು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಬಜೆಟ್‌ಗೂ ಮುನ್ನ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲವಾದ್ದರಿಂದ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಜಾಧವ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಮಾ.23ರಿಂದ 31ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.