ಬೆಂಗಳೂರು: ನ್ಯಾಯಾಲಯದ ವಿಚಾರಣೆ ವೇಳೆ ಬಂಧಿತ ಶಂಕಿತ ಉಗ್ರ ತನ್ನ ಪ್ರಶ್ನೆಗಳ ಮೂಲಕವಾಗಿ ಪೊಲೀಸರ ಬೆವರಿಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೈದರಾಬಾದ್ ಅವಳಿ ಸ್ಫೋಟ, ಮುಂಬೈ ಸರಣಿ ಸ್ಫೋಟ ಪ್ರಕರಣ ಸೇರಿದಂತೆ 4 ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೊತ್ತು, ಕಾನೂನು ಬಾಹಿರ ಚಟುವಟಿಕೆಗೆಗಳ ನಿಯಂತ್ರಣ ಕಾಯ್ದೆ, ಮತ್ತು ಸ್ಫೋಟಕ ಕಾಯ್ದೆ ಅಡಿಯಲ್ಲಿ ಬಂಧಿತನಾಗಿರುವ ಅಕ್ಬರ್ ಇಸ್ಮಾಯಿಲ್ ಚೌಧರಿ ಪೊಲೀಸರನ್ನು ತರಾಟೆ ತೆಗೆದುಕೊಂಡಿದ್ದಾನೆ. ತನ್ನ ಮೇಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆರ್ ಟಿಐ ಅಡಿ ಮಾಹಿತಿ ಕೇಳಿದ್ದಾನೆ. ಆದರೆ ಉಳ್ಳಾಲ ಪೊಲೀಸರಿಂದ ಮಾಹಿತಿ ವಿಳಂಬವಾದ ಕಾರಣ ಇಸ್ಮಾಯಿಲ್ ಚೌಧರಿ ಉಳ್ಳಾಲ ಪೊಲೀಸರನ್ನೇ ರಾಜ್ಯ ಮಾಹಿತಿ ಹಕ್ಕು ಆಯೋಗ ಮುಂದೆ ಎಳೆದು ತಂದಿದ್ದಾನೆ. ಆ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಟಿಐ ಅಸ್ತ್ರ ಬಳಸಿ ಶಂಕಿತ ಉಗ್ರಗಾಮಿಯೊಬ್ಬ ರಾಜ್ಯದ ಪೊಲೀಸರ ಬೆವರಿಳಿಸಿದ್ದಾನೆ.
ಏನಿದು ಪ್ರಕರಣ
2008ರಲ್ಲಿ ಮುಂಬೈ ಸರಣಿ ಸ್ಫೋಟದ ಆರೋಪದ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗೆಗಳ ನಿಯಂತ್ರಣ ಕಾಯ್ದೆ, ಮತ್ತು ಸ್ಫೋಟಕ ಕಾಯ್ದೆ ಅಡಿಯಲ್ಲಿ ಮುಂಬೈ ಪೊಲೀಸರು ಅಕ್ಬರ್ ಇಸ್ಮಾಯಿಲ್ ಚೌಧರಿಯನ್ನು ಬಂಧಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡು 8 ವರ್ಷಗಳೇ ಕಳೆದರೂ ಈ ಸಂಬಂಧ ಹೆಚ್ಚಿನ ಬೆಳವಣಿಗೆ ಕಾಣುವುದಿಲ್ಲ. ಇದರಿಂದ ಅಸಮಾಧಾನಗೊಂಡ ಚೌದರಿ 2014ರ ಫೆ.28ರಂದು ಮಾಹಿತಿ ಹಕ್ಕಿನ ಕಾಯ್ದೆಯ ಅಡಿಯಲ್ಲಿ ಉಳ್ಳಾಲ ಪೊಲೀಸರಿಗೆ ಒಂದು ಅರ್ಜಿ ಸಲ್ಲಿಸಿ, ನನ್ನನ್ನು ಪ್ರಕರಣದಿಂದ ಕೈಬಿಡಿ ಅಥವಾ ಬಂಧಿಸಿ ಎಂದು ಕೇಳಿಕೊಳ್ಳುತ್ತಾನೆ.
ಆದರೆ ಉಳ್ಳಾಲ ಪೊಲೀಸರು ಸರಿಯಾಗಿ ಮಾಹಿತಿ ನೀಡದ ಕಾರಣ ಇಸ್ಮಾಯಿಲ್ ಚೌಧರಿ ಮುಂಬೈ ಜೈಲು ಅಧಿಕಾರಿಗಳ ಮೂಲಕ 2014ರ ಮೇ.5ರಂದು ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿ ತನ್ನ ಪ್ರಕರಣದ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾನೆ. ಹೀಗಾಗಿ ಮಾಹಿತಿ ಹಕ್ಕು ಆಯೋಗ 2015 ಮಾರ್ಚ್ 26 ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮತ್ತು ಚೌದರಿ ಮತ್ತು ಆತನ ಪರ ವಕೀಲರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರ ಬಿಗಿ ಭದ್ರತೆಯಲ್ಲಿ ಆಗಮಿಸಿದ್ದ ಇಸ್ಮಾಯಿಲ್ ಚೌಧರಿ, ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್‍ನಲ್ಲಿರುವ ಮಾಹಿತಿ ಹಕ್ಕು ಆಯೋಗದ ಮುಂದೆ ಹಾಜರಾಗಿ ಗುರುವಾರ ತನ್ನ ವಾದ ಮಂಡಿಸಿದ್ದಾನೆ. ಅಂತಿಮವಾಗಿ ಚೌಧರಿ ಅರ್ಜಿಗೆ 1 ತಿಂಗಳಲ್ಲಿ ಮಾಹಿತಿ ಒದಗಿಸುವಂತೆ ಮಾಹಿತಿ ಹಕ್ಕು ಆಯೋಗ ಉಳ್ಳಾಲ ಪೊಲೀಸರಿಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್‍ಗೆ ಹೋಗುತ್ತೇನೆ: ಚೌದರಿ ಎಚ್ಚರಿಕೆ
ಖಾಸಗಿ ಮಾಧ್ಯಮವೊಂದರಲ್ಲಿಕ್ಕೆ ಮಾತನಾಡಿದ ಇಸ್ಮಾಯಿಲ್ ಚೌಧರಿ, “ಈಗಾಗಲೇ ವಿಚಾರಣೆ ಆರಂಭವಾಗಿದ್ದು, ನ್ಯಾಯ ಸಿಗಬಹುದು ಎಂಬ ವಿಶ್ವಾಸವಿದೆ. ಒಂದು ವೇಳೆ ಸರಿಯಾದ ಮಾಹಿತಿ ಸಿಗದಿದ್ದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ” ಎಂದು ಹೇಳಿದ್ದಾನೆ.