ಬೆಂಗಳೂರು: ಬಿಬಿಎಂಪಿ ವಿಭಜನೆ, ವಾರ್ಡ್ ಗಳ ಪುನರ್ ವಿಂಗಡಣೆಯ ನೆಪ ಹೇಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಬಾರದು ಮತ್ತು ಮೇ 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಭಜನೆಯವರೆಗೆ ಬಿಬಿಎಂಪಿಯನ್ನು ಖಾಲಿ ಇಡಲು ಸಾಧ್ಯವಿಲ್ಲ. ಮೇ 30ರೊಳಗೆ ಚುನಾವಣೆ ನಡೆಸಿ ಎಂದಿದೆ. ಅಲ್ಲದೆ ಏಪ್ರಿಲ್ 13ರೊಳಗೆ ಮೀಸಲಾತಿ ಪಟ್ಟಿ ನೀಡುವಂತೆ ಸೂಚನೆ ನೀಡಿದೆ. ಇಲ್ಲದಿದ್ದರೆ ಹಾಲಿ ಮೀಸಲಾತಿ ಪಟ್ಟಿಯಂತೆಯೇ ಚುನಾವಣೆ ನಡೆಸಲು ಆದೇಶ ನೀಡಲಾಗುವುದು ಎಂದು ಸರ್ಕಾರಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಎಚ್ಚರಿಕೆ ನೀಡಿದ್ದಾರೆ.
ಇದೇ ಮಾರ್ಚ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತ ಸುಧಾರಣೆ ದೃಷ್ಟಿಯಿಂದ ಬಿಬಿಎಂಪಿಯನ್ನು 3 ಭಾಗಗಳಾಗಿ ವಿಭಜನೆ ಮಾಡಲು ನಿರ್ಧರಿಸಲಾಗಿತ್ತು. ಅಲ್ಲದೇ ವಾರ್ಡ್ ಪುನರ್ ವಿಂಗಡಣೆ ಕಾರ್ಯದ ಹೊಣೆಗಾರಿಕೆಯನ್ನು ಈಗಾಗಲೇ ರಚನೆಯಾಗಿರುವ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ರಾಜ್ಯ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಕಾರ್ಪೋರೇಟರ್ ಗಳಾದ ಬಿ.ಸೋಮಶೇಖರ್, ರಾಮಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಬಿಬಿಎಂಪಿ ವಿಭಜನೆ ತಕ್ಷಣಕ್ಕೆ ಸಾಧ್ಯವಿಲ್ಲ. ರಾಜ್ಯ ಸರ್ಕಾರದಿಂದ ಏಕಪಕ್ಷೀಯ ಕ್ರಮ ಸರಿಯಲ್ಲ ಎಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.