ಬೆಂಗಳೂರು: ಸಾಹಿತಿಗಳು,ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ನಾನಾ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ದುಂಡು ಮೇಜಿನ ಸಭೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕಾನೂನು ಕೈಗೆತ್ತಿಕೊಂಡರೂ ಪರವಾಗಿಲ್ಲ, ಪಾಲಿಕೆ ವಿಭಜನೆಯ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳುವ ತನಕ ಹೋರಾಟ ನಡೆಸುವುದಾಗಿ ಅದು ಎಚ್ಚರಿಸಿದೆ. ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಈ ಸಭೆಯಲ್ಲಿ ಪಾಲಿಕೆ ವಿಭಜನೆಯಿಂದ ಬೆಂಗಳೂರು ನಗರದ ಮೇಲಾಗುವ ನಾನಾ ರೀತಿಯ ಅನಾಹುತಗಳು ಪ್ರಸ್ತಾಪಕ್ಕೆ ಬಂದವು.
ಪಾಲಿಕೆ ವಿಭಜನೆಯಾದರೆ, ನಗರದಲ್ಲಿ ಕನ್ನಡಿಗರಿಗೆ ಧಕ್ಕೆ ಉಂಟಾಗಲಿದೆ. ರಾಜಧಾನಿ ಅನ್ಯಭಾಷಿಕರ ಕೈಗೆ ಸಿಗಲಿದೆ ಎಂದು ಸಾಹಿತಿಗಳು ಮತ್ತು ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದರೆ, ಬಿಬಿಎಂಪಿ ಚುನಾವಣೆಯನ್ನು ಮುಂದೂಡುವುದರ ಭಾಗವಾಗಿಯೇ ಪಾಲಿಕೆ ವಿಭಜನೆಯ ಹುನ್ನಾರ ನಡೆದಿದೆ ಎಂದು ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದರು.
ಬೆಂಗಳೂರು ನಗರಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಅದು ಉಳಿಯಬೇಕಾದರೆ ವಿಭಜನೆ ನಿಲ್ಲಬೇಕು. ಯಾರದೋ ಪ್ರತಿಷ್ಠೆಗಾಗಿ ಸರ್ಕಾರ, ಮಣಿಯಬಾರದು. ಆಡಳಿತಾತ್ಮಕ ನೂನ್ಯತೆಗಳಿದ್ದರೆ, ಅವುಗಳನ್ನು ನಾನಾ ಕ್ರಮಗಳಲ್ಲಿ ಸರಿಪಡಿಸಲು ಸಾಧ್ಯವಿದೆ. ಹಾಗಿದ್ದೂ, ಅದನ್ನೆ ನೆಪವಾಗಿಸಿಕೊಂಡು ವಿಭಜನೆ ಮಾಡಿ ಒಳ್ಳೆಯ ಆಡಳಿತ ನೀಡುತ್ತೇವೆ ಎನ್ನುವುದು ಮೂರ್ಖತನದ ಕೆಲಸ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ ತರಾಟೆಗೆ ತೆಗೆದುಕೊಂಡರು. ಸ್ವಾರ್ಥಕ್ಕಾಗಿ ಪಾಲಿಕೆಯನ್ನು ವಿಭಜನೆ ಮಾಡುವ ಕುತಂತ್ರ ನಡೆಯುತ್ತಿದೆ. ಪಾಲಿಕೆ ಚುನಾವಣೆಯನ್ನು ಮುಂದೂಡುವ ಹುನ್ನಾರವೂ ಇದರ ಹಿಂದಿದೆ. ಇದು ಅನುಷ್ಠಾನಕ್ಕೆ ಬಂದರೆ ಬೆಂಗಳೂರು ನಗರದ ಸಾಂಸ್ಕೃತಿಕ ಪರಂಪರೆ ನಾಶವಾಗಲಿದೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು. ಯಾವುದೇ ರಾಜಕೀಯ ಸ್ವಾರ್ಥಕ್ಕಾಗಿ ಪಾಲಿಕೆ ವಿಭಜನೆ ಮಾಡುತ್ತೆ ವೆಂದರೂ, ಜನರ ಮುಂದೆ ಅವರ ಆಟ ನಡೆಯದು. ಜನ ಜಾಗೃತಿ ಮೂಡಿಸುವ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಆಗಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಪಾಲಿಕೆ ವಿಭಜನೆಯ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕೆಂಬುದು ತಮ್ಮ ಒತ್ತಾಯವಾಗಿದೆ. ಇದಕ್ಕೆ
ಸರ್ಕಾರ ಮಣಿಯದಿದ್ದರೆ, ಕಾನೂನು ಕೈಗೆತ್ತಿಕೊಳ್ಳುವುದಕ್ಕೂ ತಾವು ಸಿದ್ಧ ಎಂದರು. ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಅಶ್ವತ್ಥ ನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ
ಶಿವರಾಂ, ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು ಹಾಜರಿದ್ದರು.