ಬೆಂಗಳೂರು: ಮಕ್ಕಳ ಐಕ್ಯೂ ಹೆಚ್ಚಿಸುವ ಹೆಸರಿನಲ್ಲಿ ಪೋಷಕರನ್ನು ಹಾಗೂ ಸಾರ್ವಜನಿಕರನ್ನು ಹಲವಾರು ಸಂಸ್ಥೆಗಳು ವಂಚಿಸುತ್ತಿದ್ದು, ಇದರ ಅರಿವು ಮೂಡಿಸಲೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜನಜಾಗೃತಿ ಕಾರ್ಯಕ್ರಮವನ್ನು ಮೇ 12ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ನ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ, ಇತ್ತೀಚೆಗೆ ಮಕ್ಕಳಿಗೆ ಐಕ್ಯೂ ಹೆಚ್ಚಿಸುತ್ತೇವೆ ಎಂದು ವಿವಿಧ ಸಂಸ್ಥೆಗಳು ಪೋಷಕರನ್ನು ಸುಲಿಗೆ ಮಾಡುತ್ತಿವೆ ಪ್ರತಿ ವಿದ್ಯಾರ್ಥಿಗೆ 25 ಸಾವಿರದಿಂದ 50 ಸಾವಿರದವರೆಗೆ ಶುಲ್ಕ ವಿಧಿಸುತ್ತಿದೆ. ತಜ್ಞ ವೈದ್ಯರ ಪ್ರಕಾರ ಮಿಡ್ ಬ್ರೇನ್ ಆ್ಯಕ್ಟಿವೇಶನ್ ಮಾಡಲು ಸಾಧ್ಯವಿಲ್ಲ.
ಪೋಷಕರು ತಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚಲಿ ಎಂದು ಮೋಸ ಹೋಗುತ್ತಿದ್ದಾರೆ.
ಈ ಸಂಬಂಧ ಜನಜಾಗೃತಿ ಮೂಡಿಸಲೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬನಶಂಕರಿ 2ನೇ ಹಂತದಲ್ಲಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರೊ|ಎಂ.ಎ ಸೇತುರಾವ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಖ್ಯಾತ ವಿಚಾರವಾದಿ ಡಾ.ನರೇಂದ್ರ ನಾಯಕ್, ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್, ನಿಮ್ಹಾನ್ಸ್ ನ ಮನಃಶಾಸ್ತ್ರ ವಿಭಾಗದ ಪ್ರಾಧ್ಯಪಕ ಡಾ.ಜೆ ಕೇಶವ್ ಕುಮಾರ್ ಹಾಗೂ ನಕುಲ್ ಶೆಣೈ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.