ಬೆಂಗಳೂರು: ನಟ ವಿಷ್ಣುವರ್ಧನ್ ಸ್ಮಾರಕವನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸುವ ಪ್ರಸ್ತಾಪ ಕೈಬಿಡಲಾಗಿದೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.
ವಿಷ್ಣುವರ್ಧನ್ ಅವರ ಆತ್ಮೀಯರು ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ವಿಷ್ಣು ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರಿಸಬೇಕೆಂದು ಮಾಡಲಾಗಿದ್ದ ನಿರ್ಧಾರವನ್ನು ಬದಲಿಸಿದ್ದೇವೆ.
ಮೈಸೂರಿನಲ್ಲಿ ಇದಕ್ಕಾಗಿ ಸರ್ಕಾರ ಭೂಮಿ ನೀಡಲು ಸಹ ನಿರ್ಧರಿಸಿ ಜಾಗ ಗುರುತಿಸಲು ಸೂಚನೆ ನೀಡಿತ್ತು, ಆದರೆ ಸ್ಮಾರಕ ಬೆಂಗಳೂರಿನಲ್ಲೇ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು. ಇಷ್ಟು ದಿನಗಳ ಕಾಲ ಸ್ಮಾರಕ ನಿರ್ಮಿಸಲು ಆಗಲಿಲ್ಲ ಎಂಬ ಕಾರಣಕ್ಕಾಗಿಯೇ ನಾವು ಸ್ಥಳಾಂತರ ಮಾಡಿಸಲು ಉದ್ದೇಶಿಸಿದ್ದೆವು. ಆದರೆ, ಅಭಿಮಾನಿಗಳ ಒತ್ತಾಯದಿಂದ ಇಲ್ಲೇ ಉಳಿಸಿಕೊಳ್ಳಲು ಉದ್ದೇಶಿಸಿದ್ದೇವೆ. ಆದರೆ, ಇಲ್ಲಿ ಸ್ಮಾರಕ ಸಕಾಲಕ್ಕೆ ಆಗುವುದಿಲ್ಲ ಎಂಬ ಬೇಸರವೂ ಇದೆ. ಅಭಿಮಾನಿಗಳ ನಂಬಿಕೆಗೆ ಧಕ್ಕೆ ಆಗಬಾರದೆಂಬ ಕಾರಣಕ್ಕೆ ತೀರ್ಮಾನ ಬದಲಿಸಿದೆವು ಎಂದರು.
ಸಮಾಧಿ ಸ್ಥಳದಲ್ಲಿಹಾಗೂ ಅದರ ಎದುರಿನ ಎರಡು ಎಕರೆ ಜಾಗದಲ್ಲಿ ಧ್ಯಾನಮಂದಿರ, ವಿಷ್ಣು ಸ್ಮಾರಕ ಸೇರಿ ಪೂರ್ವ ಯೋಜಿತ ಯೋಜನೆಗಳನ್ವಯ ಎಲ್ಲವನ್ನೂ ನಿರ್ಮಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಸಮಾಧಿ ಇರುವ ಸ್ಥಳ ಹಾಗೂ ಇದಕ್ಕಾಗಿ ಸರ್ಕಾರ ನೀಡಿರುವ ಸ್ಥಳಗಳು ಕಾನೂನು ತೊಡಕಿದೆ. ಅದನ್ನು ನಿವಾರಿಸಿಕೊಂಡು ನಂತರ ಹಂತಹಂತವಾಗಿ ಯೋಜನೆ ಕಾರ್ಯಗತವಾಗುವುದು, ಈ ಬಗ್ಗೆ ಸರ್ಕಾರದೊಂದಿಗೂ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.