ಬೆಂಗಳೂರು: ಆರ್ಥಿಕ ಉದ್ದೇಶಕ್ಕಾಗಿ ಮಾಡುವ ಉದ್ಯೋಗದಿಂದ ನಿವೃತ್ತಿಯಾದ ನಂತರ ವಚನ ಪ್ರಚಾರದಂಥ ಸದುದ್ದೇಶಗಳ ಕಾರ್ಯದಲ್ಲಿ ತೊಡಗಬೇಕು ಎಂದು ಉಪ ಲೋಕಾಯುಕ್ತ ಬಿ.ಎಸ್.ಮಜಗೆ ಅಭಿಪ್ರಾಯಪಟ್ಟರು.
ಕರ್ನಾಟಕ ವಚನಸಾಹಿತ್ಯ ಪರಿಷತ್ ಭಾನುವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ `ಕಾಯಕ ದಿನಾಚರಣೆ'ಯಲ್ಲಿ ಮಾತನಾಡಿದ ಅವರು, ಉದ್ಯೋಗದಿಂದ ನಿವೃತ್ತಿಯಾದ
ನಂತರ ವಚನ ಪ್ರಚಾರದಂತಹ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ವಚನಕಾರರು ಹೇಳಿದಂತೆ ಕಾಯಕವನ್ನೇ ದೇವರಂತೆ ಕಾಣಬೇಕಿದ್ದು, ನಿವೃತ್ತಿ ನಂತರವೂ ಉತ್ತಮ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ವಚನಗಳಲ್ಲಿ ಜೀವನಸಾರ ಅಡಗಿದ್ದು, ಬದುಕುವ ರೀತಿಯನ್ನು ಜನರಿಗೆ ತಿಳಿ ಸಲು ಪ್ರಚಾರ ಕಾರ್ಯ ಕೈಗೊಳ್ಳಬೇಕು. ಶರಣರ ತತ್ವಗಳನ್ನು ಓದಿ, ಮನದಟ್ಟು ಮಾಡಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಂಡರೆ ಸಾರ್ಥಕವಾಗುತ್ತದೆ ಎಂದರು.
ನ್ಯಾಯಾಧೀಶನಾಗಿದ್ದಾಗ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೆ. ನ್ಯಾಯಾಧೀಶರು ನೀಡುವ ತೀರ್ಪು ಜನರ ಭವಿಷ್ಯ ನಿರ್ಧರಿಸುತ್ತದೆ. ಹೀಗಾಗಿ ನ್ಯಾಯ ನೀಡುವಾಗ ಎಚ್ಚರಿಕೆ ವಹಿಸುತ್ತಿದ್ದೆ. ನಿಷ್ಠೆಯಿಂದ ನ್ಯಾಯ ನೀಡುವ ಕಾಯಕ ಮಾಡಿದರೆ ಅದೇ ದೇವರ ಕೆಲಸವಾಗುತ್ತದೆ. ಒಬ್ಬ ವ್ಯಕ್ತಿ ಮಾಡುವ ಕಾಯಕ ಸಮಾಜದ ಮೇಲೂ ಪರಿಣಾಮ ಬೀರುವುದರಿಂದ ಕಾಯಕವನ್ನು ಪ್ರೀತಿಯಿಂದ ಮಾಡಬೇಕು ಎಂದರು.
ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್.ಪ್ರಸಾದ್, ರಾಣಿ ಸತೀಶ್, ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ ಹೊಸಮನಿ ಹಾಜರಿದ್ದರು.