ಜಿಲ್ಲಾ ಸುದ್ದಿ

ಬಿಬಿಎಂಪಿ ಪರಿಷ್ಕೃತ ಬಜೆಟ್ ರು.5,500 ಕೋಟಿಗೆ ಇಳಿಕೆ

ಬೆಂಗಳೂರು: ಬಿಬಿಎಂಪಿಯ ಮೇಯರ್ ಅವಧಿಯಲ್ಲಿ ಮಂಡನೆಯಾಗಿದ್ ಬಜೆಟ್ ಸರ್ಕಾರದ ಪರಿಶೀಲನೆಯಲ್ಲಿದ್ದು, ಈ ನಡುವೆ ಆಡಳಿತಾಧಿಕಾರಿಗಳು ಪರಿಷ್ಕೃತ ಬಜೆಟ್‍ನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಮೇಯರ್ ಶಾಂತಕುಮಾರ್ ಅವಧಿಯಲ್ಲಿ ಮಂಡಿಸಲಾಗಿದ್ದ 2015-16 ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ ರು.1200 ಕೋಟಿ ಕಡಿತಗೊಳಿಸಿ ಪರಿಷ್ಕರಣೆ ಮಾಡಲಾಗಿದ್ದು, ಎರಡು ದಿನಗಳೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. 5 ವರ್ಷಗಳ ಆಡಳಿತದಲ್ಲಿ ಬೃಹತ್ ಮೊತ್ತದ ಬಜೆಟ್ ಮಂಡಿಸಿದ್ದ ಬಿಜೆಪಿ, ಕೊನೆಯ ಅವಧಿಯಲ್ಲಿ ರು. 6,729 ಕೋಟಿ ಮೊತ್ತದ ವಾಸ್ತವ ಬಜೆಟ್ ಮಂಡಿಸಿತ್ತು. ಆದರೆ ಬಜೆಟ್ ಮೊತ್ತ ಆದಾಯಕ್ಕಿಂತ ಅಧಿಕವಾಗಿದ್ದು, ಪರಿಷ್ಕರಿಸುವ ಅಗತ್ಯವಿದೆ ಎಂದು ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಅಭಿಪ್ರಾಯಪಟ್ಟಿದ್ದರು.

ಬಿಬಿಎಂಪಿಗೆ ಸದ್ಯಕ್ಕೆ ಬರುತ್ತಿರುವ ಆದಾಯಕ್ಕೆ ತಕ್ಕಂತೆ ಬಜೆಟ್ ಪರಿಷ್ಕರಣೆಗೊಂಡಿದೆ. ನಿರ್ವಹಣಾ ಕಾಮಗಾರಿಗಳು ಯಥಾಪ್ರಕಾರ ಮುಂದುವರಿಯಲಿದ್ದು, ಇವುಗಳಿಗೆ ಹೆಚ್ಚಿನ ಹಣ ಬೇಕಿದ್ದರೆ ಸರ್ಕಾರ ಅನುದಾನ ಮೂಲಕ ನಡೆಸಲಾಗುತ್ತದೆ. ನಗರೋತ್ಥಾನ ಯೋಜನೆಯಡಿ ರು.1 ಸಾವಿರ ಕೋಟಿ ಲಭ್ಯವಿದ್ದು, ಕಾಮಗಾರಿಗಳಿಗೆ ಅಗತ್ಯವಿದ್ದರೆ ಈ ಹಣವನ್ನೂ ಬಳಸಿಕೊಳ್ಳ ಲಾಗುತ್ತದೆ. ಕೊನೆಯ ಬಜೆಟ್‍ನಲ್ಲಿ ಯಾವುದೇ ಹೊಸ ಕಾರ್ಯಕ್ರಮಗಳ ಘೋಷಣೆ ಮಾಡದೆ, ಇರುವ ಕಾಮಗಾರಿ ಗಳನ್ನೇ ಮುಂದುವರಿಸ ಲಾಗುವುದು ಎಂದು ತಿಳಿಸಲಾಗಿತ್ತು. ಆದರೆ `ವಾಸ್ತವ' ಎಂದು ಹೇಳಲಾಗಿದ್ದ ಈ ಬಜೆಟ್ ನಲ್ಲೂ ದೋಷವಿದ್ದು, ರು. 6,729 ಕೋಟಿಯಿದ್ದ ಬಜೆಟ್ ಈಗ ರು.5,500 ಕೋಟಿಗೆ ಇಳಿದಿದೆ.

ಕೆಲವು ವೆಚ್ಚಗಳಿಗೆ ಕಡಿವಾಣ ಹಾಕಿರುವುದರಿಂದ ಮೊತ್ತದ ಪ್ರಮಾಣ ಕಡಿಮೆಯಾಗಿದ್ದು, ಯಾವುದೇ ಕಾಮಗಾರಿ ಅಥವಾ ಮುಂದುವರಿದ ಯೋಜನೆಗಳಿಗೆ ಕತ್ತರಿ ಹಾಕಿಲ್ಲ.
ಸರ್ಕಾರದಲ್ಲೇ ಬಾಕಿ: ಕೌನ್ಸಿಲ್‍ನಲ್ಲಿ ಮಂಡನೆಯಾಗಿ ಚರ್ಚೆಗೆ ಒಳಗಾದ ವಾಸ್ತವ ಬಜೆಟ್ ಇನ್ನೂ ಸರ್ಕಾರದಲ್ಲೇ ಇದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಬಜೆಟ್ ತಿರಸ್ಕಾರವಾದ ನಂತರವಷ್ಟೇ ಹೊಸ ಬಜೆಟ್ ಅಥವಾ ಪರಿಷ್ಕರಣೆಯಾದ ಬಜೆಟ್ ಸಲ್ಲಿಸಬೇಕು ಎಂದು ಮಾಜಿ ಸದಸ್ಯರು ಈ ಹಿಂದೆ ಆಗ್ರಹಿಸಿದ್ದರು. ಮಂಡನೆಯಾದ ಬಜೆಟ್ ಇನ್ನೂ ಸರ್ಕಾರದ ಹಂತದಲ್ಲೇ ಪರಿಶೀಲನೆಯಲ್ಲಿದೆ.

SCROLL FOR NEXT