ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ಪ್ರಕರಣದಲ್ಲಿ ರಾಜ್ಯ ಸಕಾರ ಡರ್ಟಿ ಟ್ರಿಕ್ಸ್ ಅನುಸರಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಮಾಜಿ ಸಚಿವ ಸುರೇಶ್ ಕುಮಾರ್, ಅಪಾರ್ಟ್ ಮೆಂಟ್ ನಲ್ಲಿ ಡಿ.ಕೆ ರವಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾದ ನಂತರ, ರವಿ ತಮ್ಮ ಬ್ಯಾಚ್ ಮೇಟ್ ಅಧಿಕಾರಿಗೆ 44 ಭಾರಿ ಕರೆ ಮಾಡಿದ್ದರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಡಿ.ಕೆ ರವಿ ತಮ್ಮ ಬ್ಯಾಚ್ ಮೇಟ್ ಅಧಿಕಾರಿಗೆ ಕೇವಲ ಒಂದು ಭಾರಿ ಕರೆ ಮಾಡಿದ್ದರು ಎನ್ನುವ ಸತ್ಯ ಸಂಗತಿಯನ್ನ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ. ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದ ಸರ್ಕಾರ ರವಿ ಸಾವಿನ ಪ್ರಕರಣದಲ್ಲಿ ಕೀಳು ರಾಜಕೀಯ ಮಾಡಿತು ಎಂದು ಕಿಡಿ ಕಾರಿದ್ರು.
ಡಿ.ಕೆ ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ರಾಜ್ಯದ ಜನತೆ ಹಾಗೂ ರವಿ ಪೋಷಕರು ಹೋರಾಟ ನಡೆಸಿದ್ದರೂ ಕೇರ್ ಮಾಡದ ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ಹೈ ಕಮಾಂಡ್ ನಿಂದ ನಿರ್ದೇಶನ ಬಂದ ತಕ್ಷಣವೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರ ಔಚಿತ್ಯವೇನು ಎಂದು ಸುರೇಶ್ ಕುಮಾರ್ ಪ್ರಶ್ನಿಸಿದರು. ಸತ್ತ ವ್ಯಕ್ತಿಗಳ ವ್ಯಕ್ತಿತ್ವ ಬಗ್ಗೆ ಇಲ್ಲ ಸಲ್ಲದ ಗಾಳಿ ಸುದ್ದಿ ಹಬ್ಬಿಸುವ ಬದಲು ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸುವಂತೆ ಸುರೇಶ್ ಕುಮಾರ್ ಆಗ್ರಹಿಸಿದರು.