ಬೆಂಗಳೂರು: ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಹಾಗೂ ಶುಲ್ಕ ನಿಯಂತ್ರಣ ತಿದ್ದುಪಡಿ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ವೃತ್ತಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಶೇ.10ರಿಂದ 12ರಷ್ಟು ಏರಿಕೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿವೆ.
ಮೇ 25 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಕುರಿತು ನಿರ್ಣಯಿಸಲಿದೆ. ಆದರೆ ಸೀಟು ಹಂಚಿಕೆ ಪ್ರಮಾಣದಲ್ಲಿ ಯಾವುದೇ ಬದಲಾವಣೆ ತರದಿರಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆರ್.ವಿ. ದೇಶಪಾಂಡೆ, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹಾಜರಿಯಲ್ಲಿ ಗುರುವಾರ ಸಂಜೆ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
2006ರ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ, ಶುಲ್ಕ ನಿಯಂತ್ರಣ ಕಾಯಿದೆಯನ್ನು ಯಥಾಸ್ಥಿತಿಯಲ್ಲಿ ಜಾರಿಗೆ ತರಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವು ತಿದ್ದುಪಡಿಗಳೊಂದಿಗೆ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ. ಸುಪ್ರೀಂ ಆದೇಶದಂತೆ ಜೂ.5ರೊಳಗೆ ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಮಾಣ ಪ್ರಕಟಿಸುವ ಅನಿವಾರ್ಯ ಇರುವುದರಿಂದ ಸುಗ್ರೀವಾಜ್ಞೆ ಮೊರೆ ಹೋಗಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಸರ್ಕಾರ ಮಣಿದರೆ ಬರುವ ಶೈಕ್ಷಣಿಕ ವರ್ಷದಲ್ಲಿ ಮಾತ್ರ ಎಂಜಿನಿಯರಿಂಗ್ ಶುಲ್ಕ ರು.45 ಸಾವಿರ ಹಾಗೂ ರು.50 ಸಾವಿರವಾಗಿರುತ್ತದೆ. ವೈದ್ಯ ಕೋರ್ಸ್‍ನಲ್ಲಿ ಶೇ.10ರಷ್ಟು ಶುಲ್ಕ ಹೆಚ್ಚಾಗಲಿದೆ ಎಂದು ಈಗಾಗಲೇ ವೈದ್ಯ ಶಿಕ್ಷಣ ರಾಜ್ಯ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ಕೋಟಾ ಯಥಾಸ್ಥಿತಿ
ಎಂಜಿನಿಯರಿಂಗ್ ಹಾಗೂ ವೈದ್ಯ ಸರ್ಕಾರಿ ಸೀಟುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಶೇ.45 ಹಾಗೂ ವೈದ್ಯ
ಕಾಲೇಜುಗಳಲ್ಲಿ ಶೇ.40 ಸೀಟುಗಳು ಸರ್ಕಾರಿ ಕೋಟಾಕ್ಕೆ ಲಭ್ಯವಾಗಲಿವೆ. ಇದನ್ನು ಹೊರತು ಪಡಿಸಿ ಎಂಜಿನಿಯರಿಂಗ್ ನಲ್ಲಿ ಶೇ.5ರಷ್ಟು ಸೀಟು ಗಳು ಸೂಪರ್ ನ್ಯೂಮರರಿ ಕೋಟಾಕ್ಕೆ ದೊರೆಯಲಿದೆ. ಆದರೆ ವೈದ್ಯ ಕೋರ್ಸ್‍ಗಳಲ್ಲಿ ಮಾತ್ರ ಎನ್‍ಆರ್‍ಐ ಕೋಟಾ ಹೆಚ್ಚಾಗುವ ಸಾಧ್ಯತೆಯಿದೆ. ಸುಪ್ರೀಂ ಆದೇಶಕ್ಕೆ ವಿರುದ್ಧವಾಗಿ ಶೇ.20ಕ್ಕೆ ಏರಿಸಲು ಗುರುವಾರ ನಡೆದ ಉನ್ನತ ಮಟ್ಟದ ಸಭೆ ಅನುಮತಿ ನೀಡಿದೆ. ಸುಪ್ರೀಂ ಆದೇಶದಂತೆ ಎನ್‍ಆರ್‍ಐ ಸೀಟುಗಳನ್ನು ಶೇ.15ಕ್ಕಿಂತ ಹೆಚ್ಚು ನೀಡುವಂತಿಲ್ಲ.