ಬೆಂಗಳೂರು: ಲಾಟರಿ ಹಗರಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಮತ್ತು ಪೊಲೀಸ್ ಮಹಾನಿರ್ದೇಶಕ(ಐಜಿಪಿ) ಸೇರಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಸಿಐಡಿ ಪೊಲೀಸರು ಲಾಟರಿ ಹಗರಣ ಪ್ರಕರಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಎಡಿಜಿಪಿ ಮತ್ತು ಐಜಿಪಿ ಸೇರಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಲಾಟರಿ ಹಗರಣದ ಪ್ರಮುಖ ಆರೋಪಿ ಪಾರಿ ರಾಜನ್ ಜತೆ ಮೊಬೈಲ್‌ನಲ್ಲಿ ನಿರಂತರ "ಸಂಪರ್ಕ' ಹೊಂದಿದ್ದರು ಎಂದು ಹೇಳಲಾಗಿದೆ.
ರಾಜನ್‌ನ ಮೊಬೈಲ್ ಕರೆಗಳ ಕುರಿತು ಮಾಹಿತಿ ಸಂಗ್ರಹಿಸಿದಾಗ ಆತನೊಂದಿಗೆ ಹಿರಿಯ ಅಧಿಕಾರಿಗಳು ಹೊಂದಿದ್ದ "ಸ್ನೇಹ' ಬಯಲಾಗಿದೆ. ಅದರಲ್ಲೂ ಪ್ರಮುಖವಾಗಿ ಆತನ ಸಂಪರ್ಕದಲ್ಲಿ ಓರ್ವ ಎಡಿಜಿಪಿ, ಐಜಿಪಿ, ಎಸ್ಪಿ ಸೇರಿ ಹಿರಿಯ ಅಧಿಕಾರಿಗಳಿದ್ದರು.
ಈ ಸಂಬಂಧ ಪ್ರತಿಕ್ರಯಿಸಿರುವ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು, ಸಿಐಡಿ ಪೊಲೀಸರಿಂದ ವರದಿಯನ್ನು ಸ್ವೀಕರಿಸಲಾಗಿದ್ದು, ಪೂರ್ಣ ಮಾಹಿತಿ ಪಡೆದುಕೊಳ್ಳುವವರೆಗೆ ಯಾವುದೇ ಅಧಿಕಾರಿಗಳ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿರುವ ಹಿನ್ನಲೆಯಲ್ಲಿ, ಕೂಲಂಕುಶವಾಗಿ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವರದಿಯ ಪ್ರಕಾರ ಸುಮಾರು 25 ಪೊಲೀಸರ ಹೆಸರು ಈ ಹಗರಣದಲ್ಲಿ ಕೇಳಿಬಂದಿದೆ. ರಾಜ್ಯಾದ್ಯಂತ ಇಬ್ಬರು ಎಡಿಜಿಪಿ, 3 ಐಜಿಪಿ, ನಿವೃತ್ತ ಡಿಜಿಪಿ, ಎಸ್ಪಿ ಮತ್ತು ಡಿವೈಎಸ್ ಪಿ ಭಾಗಿಯಾಗಿದ್ದಾರೆ. ಈಗಾಗಲೇ ಈ ಆರೋಪದ ಮೇಲೆ ಎಸ್ಪಿ ಧರಣೇಶ್ ಅಮಾನತುಗೊಂಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ನಾನು ಈ ಹಗರಣದಲ್ಲಿ ಭಾಗಿಯಾಗಿದ್ದೇನೆಂದು ಗಾಳಿಮಾತು ಹಬ್ಬುತ್ತಿದೆ. ರಾಜನ್ ಅವರು ನನಗೆ ಹಿತೈಷಿಯಾಗಿದ್ದರು. ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಇಬ್ಬರು ಸಂಪರ್ಕದಲ್ಲಿದ್ದೇವೆ. ಆದರೆ, ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದಿರಲಿಲ್ಲ. ಯಾವುದೇ ತನಿಖೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.