ಜಿಲ್ಲಾ ಸುದ್ದಿ

ದಲಿತರ ಜಮೀನು ಕಬಳಿಸಿದ ಭೂಮಾಫಿಯಾ

Mainashree

ಬೆಂಗಳೂರು: ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ 22 ಗುಂಟೆ ಜಮೀನನ್ನು ಜಯನಗರದ ಉಪನೋಂದಣಾಧಿಕಾರಿ ಯಾವುದೇ ಪರಿಶೀಲನೆ ನಡೆಸದೇ ಭೂಮಾಫಿಯಾದವರಿಗೆ ನೀಡಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಆರೋಪಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ಚಿಕ್ಕತೋಗೂರು ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ 22ಗುಂಟೆ ಜಮೀನನ್ನು ಜಯನಗರದ ಉಪನೋಂದಣಾಧಿಕಾರಿ ಯಾವುದೇ ಪರಿಶೀಲನೆ ನಡೆಸದೆ ಭೂಮಾಫಿಯಾದವರಿಗೆ ನೀಡಿದ್ದಾರೆ. ಈಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಬಿ.ಟಿ. ಲಲಿತಾ ನಾಯಕ್ ಒತ್ತಾಯಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 22 ಗುಂಟೆ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ಅಂಬಿಕಾ ಅವರ ಅಣ್ಣ ತಮ್ಮಂದಿರಿಗೆ ಸೇರಿದೆ. ಮೂಲತಃ ಚಲವಾದಿ ರಾಮಯ್ಯ ನಿಂದ ಬಂದ ಸ್ವತ್ತಾಗಿದ್ದು ಇದು ಪಿತ್ರಾರ್ಜಿತ ಆಸ್ತಿಯಾಗಿದೆ. ಅವರ ಮರಣದ ನಂತರ ತಂದೆ ನಂಜಪ್ಪ ಹೆಸರಿಗೆ ಬಂದು ಅವರ ಮರಣದ ನಂತರ ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಅವರ ನ್ಯಾಯಾಲಯ ಆದೇಶದಂತೆ ನಂಜಪ್ಪನವರ ವಾರಸುದಾರರಿಗೆ ಸೇರುತ್ತದೆ. ಜಯನಗರ ನೋಂದಣಾಧಿಕಾರಿ ಶಿವಪುತ್ರ ತಂಗ ಅವರು ಯಾವುದೇ ಮೂಲ ದಾಖಲೆಗಳನ್ನು ಪರಿಶೀಲಿಸದೆ ನಕಲಿ ಕರಾರು ಪತ್ರ ಸೃಷ್ಟಿಸಿ, ನಂದೀಶ್ ರೆಡ್ಡಿ ಮತ್ತು ಕೆ.ಪಿ ವೆಂಕಟೇಶ್ ಎಂಬುವವರ ಹೆಸರಿಗೆ ಮಾಡಿಕೊಟ್ಟಿದ್ದಾರೆ.

ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದ ಅವರು, ಸರ್ಕಾರ ಕೂಡಲೇ ನೋದಂಣಿ ಅಧಿಕಾರಿ ವಿರುದ್ಧ ಕ್ರಮಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು  ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಭೀಮಶಕ್ತಿ ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್, ಭಾರತ ಜನ ಜಾಗೃತಿ ಸೇನೆ ಅಧ್ಯಕ್ಷ ಮುನಿಯಪ್ಪ, ದಲಿತ ಮುಖಂಡರಾದ ಜಗನ್ನಾಥ್, ದಿನ್ನೂರು ಮಂಜುನಾಥ್, ಬಿ.ಎಸ್.ಪ್ರವೀಣ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

SCROLL FOR NEXT