ಬೆಂಗಳೂರು: ಅಕ್ರಮ ಲಾಟರಿ ದಂಧೆ ಪ್ರಕರಣದ ಬಗ್ಗೆ ಸಿಐಡಿ ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕ ತನಿಖೆ ನಡೆಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ವರದಿ ನೀಡಿತ್ತು. ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ಪಾತ್ರದ ಬಗ್ಗೆ ವಿವರಿಸಲಾಗಿತ್ತು.
ಅಮಾನತು ಆದೇಶ ಪ್ರತಿಯ ಸಾರಾಂಶ: ಅಬಕಾರಿ ಮತ್ತು ಲಾಟರಿ ನಿಷೇಧ ದಳ ಎಸ್ಸೈ ಪ್ರಕಾಶ್ ಅವರು ಆರೋಪಿ ಪಾರಿ ರಾಜನ್ ಬಂಧನಕ್ಕೆ ಯತ್ನಿಸುತ್ತಿದ್ದಾಗ ಏ.28ರ ಬೆಳಗ್ಗೆ 11.30ರಿಂದ 12ಗಂಟೆ ನಡುವೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಎಸ್ಸೈ ಪ್ರಕಾಶ್ ಅವರಿಗೆ ದೂರವಾಣಿ ಕರೆ ಮಾಡಿ, ಕಾನೂನಿನ ಪ್ರಕಾರ ಆರೋಪಿ ವಿರುದ್ಧ ಏನೂ ಕ್ರಮ ಕೈಗೊಳ್ಳಬೇಕು ಅದನ್ನು ಮಾಡಿ. ಆತ ನನಗೆ ಪರಿಚಿತ. ಅದು, ಇದು ಅಂತಾ ಏನು ಮಾಡಬಾರದು. ಬಳಿಕ ಏ.30ರಂದು ಅಲೋಕ್ ಕುಮಾರ್ ಅವರು ತಮ್ಮ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಯಿಂದ ಎಸ್ಸೈ ಪ್ರಕಾಶ್ ಅವರಿಗೆ ಕರೆ ಮಾಡಿ, ಆರೋಪಿ ಪಾರಿ ರಾಜನ್ ಕೆಜಿಎಫ್ ಗೆ ಬರುತ್ತಾನೆ. ಆತನಿಗಾಗಿ ಹುಡುಕಾಟ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು. ಈ ಮೂಲಕ ಅಲೋಕ್ ಕುಮಾರ್ ಅವರು ಆರೋಪಿಯೊಂದಿಗೆ ನೇರ ಸಂಪರ್ಕ ಹೊಂದಿದ್ದರು ಎನ್ನುವುದು ಸಿಐಡಿಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಅಲ್ಲದೇ ಸಾಕ್ಷ್ಯಾಧಾರಗಳ ಪ್ರಕಾರ ಅಲೋಕ್ ಹಾಗೂ ಎಸ್ಸೈ ಪ್ರಕಾಶ್ ನಡುವಿನ ಸಂಭಾಷಣೆ ಖಚಿತಗೊಂಡಿದೆ. ಸಿಐಡಿ ತನಿಖೆಯ ಸಂದರ್ಭದಲ್ಲಿ ಪಾರಿ ರಾಜನ್ ಸಮಸ್ಯೆಯಲ್ಲಿದ್ದಾಗ ಅಲೋಕ್ ಕುಮಾರ್ ಅವರನ್ನು ಸಂಪರ್ಕಿಸಿ ಸಲಹೆ ಕೇಳಿದ್ದು ಸಿಐಡಿ ತನಿಖೆಯಿಂದ ತಿಳಿದು ಬಂದಿದೆ. ಸಾಂದರ್ಭಿಕ ಸಾಕ್ಷಿಗಳ ಪ್ರಕಾರ ಅಲೋಕ್ ಕುಮಾರ್ ಅವರು ಆರೋಪಿ ಪಾರಿ ರಾಜನ್ ಜತೆ ಸಂಪರ್ಕ ಇರಿಸಿಕೊಂಡಿರುವುದು ಗೊತ್ತಾಗಿದೆ. ಆರೋಪಿಗೆ ಸಹಾಯ ಮಾಡುವುದರ ಜತೆಗೆ ತನಿಖಾ ಪ್ರಕ್ರಿಯೆ ನಡುವೆ ಮಧ್ಯಪ್ರವೇಶಿಸಿದ್ದಾರೆ.
ಅಕ್ರಮ ಚಟುವಟಿಕೆಗಳನ್ನು ನಡೆಸುವವರಿಗೆ ಅಧಿಕಾರಿಗಳು ಸಹಕಾರ ನೀಡುವುದು ಸರಿಯಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದಾರೆ. ತನಿಖೆ ನಡೆಯುವವರೆಗೂ ಅಮಾನತಿನಲ್ಲಿಡುವಂತೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಸಿಐಡಿ ವರದಿಯನ್ನು ಪರಿಶೀಲಿಸಿದ್ದು ಅಲೋಕ್ ಅವರ ಮೇಲಿನ ಆರೋಪಗಳ ಬಗ್ಗೆ ಸಾಕ್ಷ್ಯಾಧಾರಕ್ಕೆ ತೃಪ್ತಿ ಹೊಂದಿದೆ. ಹೀಗಾಗಿ, ಅಮಾನತುಗೊಳಿಸುವುದು ಸೂಕ್ತ. ತನಿಖೆಯ ಅವಧಿಯಲ್ಲಿ ಲಿಖಿತ ಅನುಮತಿ ಇಲ್ಲದೇ ಅಲೋಕ್ ಅವರು ರಾಜ್ಯವನ್ನು ಬಿಟ್ಟು ತೆರಳುವಂತಿಲ್ಲ.
ಪಾರಿ ರಾಜನ್-ಅಲೋಕ್ 151 ಬಾರಿ ಸಂಭಾಷಣೆ
ಪಾರಿರಾಜನ್ ಹಾಗೂ ಅಲೋಕ್ ಕುಮಾರ್ ನಡುವೆ ಒಟ್ಟು 151 ಮೊಬೈಲ್ ಫೋನ್ ಕರೆಗಳ ಸಂಪರ್ಕ ಇರುವುದು ಕಂಡು ಬಂದಿದೆ. ಈ ಪೈಕಿ 70 ಕರೆಗಳನ್ನು ಸ್ವೀಕರಿಸಿರುವ ಅಲೋಕ್ ಅವರು 80 ಕರೆಗಳನ್ನು ಆತನಿಗೆ ಮಾಡಿದ್ದಾರೆ. ಹೀಗಾಗಿಯೇ ಅಲೋಕ್ ಕುಮಾರ್ ಮೇಲೆ ಬಲವಾದ ಶಂಕೆ ವ್ಯಕ್ತವಾಗಿದೆ. ಪಾರಿ ರಾಜನ್ ಜತೆ ಹಲವು ಪೊಲೀಸ್ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಆದರೆ ಅಲೋಕ್ ಕುಮಾರ್ ಹಾಗೂ ಧರಣೇಂದ್ರ ಮುಂಚೂಣಿಯಲ್ಲಿದ್ದಾರೆ. ಏಕೆಂದರೆ, ಹೆಚ್ಚಿನವರು ಆತನ ಕರೆಗಳನ್ನು ಸ್ವೀಕರಿಸಿರಲಿಲ್ಲ.
ಕೆಲ ಅಧಿಕಾರಿಗಳೊಂದಿಗೆ ರಾಜನ್ ನಾಲ್ಕೈದು ಕರೆಗಳನ್ನು ಮಾತ್ರ ಸ್ವೀಕರಿಸಿದ್ದಾರೆ. ಅದೂ ಕೂಡಾ ಕೆಲವೆ ಸೆಕೆಂಡುಗಳು ಮಾತನಾಡಿದ್ದಾರೆ. ಅದರಲ್ಲೂ ಇತ್ತೀಚೆಗೆ ಯಾರೊಂದಿಗೂ ಮಾತನಾಡಿಲ್ಲ. ಹೀಗಾಗಿ, ಅವರ ಹೆಸರು ಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯ ಸಿಕ್ಕಲ್ಲಿ, ಅವರ ಪಾತ್ರದ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.