ಜಿಲ್ಲಾ ಸುದ್ದಿ

ಕಬ್ಬನ್ ಪಾರ್ಕ್ ನಲ್ಲಿ ವಾಹನ ನಿಷೇಧ ಪ್ರಯೋಗ ಯಶಸ್ವಿ

Srinivas Rao BV

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಭಾನುವಾರದಂದು ವಾಹನಗಳ ಸಂಚಾರ ನಿಷೇಧ ಪ್ರಯೋಗಕ್ಕೆ ಯಶಸ್ಸು ದೊರೆತಿದೆ.

ಉದ್ಯಾನದಲ್ಲಿ ಈ ಭಾನುವಾರ ವಾಹನಗಳ ಸಂಚಾರ ನಿರ್ಬಂಧವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಭಾನುವಾರದಂದು ಕಬ್ಬನ್ ಪಾರ್ಕ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಲೆಂದು ಹಾಗೂ ವಾಯು ಮಾಲಿನ್ಯ, ಶಬ್ದಮಾಲಿನ್ಯವನ್ನು ಕಡಿಮೆ ಮಾಡುವ ಆಲೋಚನೆಯಿಂದ ಭಾನುವಾರದಂದು ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಪ್ರಯೋಗಕ್ಕೆ ಪ್ರಥಮ ವಾರದಲ್ಲೇ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಮಕ್ಕಳು, ವೃದ್ಧರು ಎಲ್ಲರೂ ವಾಹನಗಳ ಭೀತಿಯಿಲ್ಲದೇ ಉದ್ಯಾನದಲ್ಲಿ ಸಂಚರಿಸಿದರು.

ಶನಿವಾರ ರಾತ್ರಿಯೇ ಸಂಚಾರ ಪೊಲೀಸರು ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದ್ದರು ಹೀಗಾಗಿ ಬೆಳಿಗ್ಗೆ 8 ರ ವೇಳೆಗೆ ಉದ್ಯಾನದ ಎಲ್ಲಾ ಪ್ರವೇಶ ದ್ವಾರದ ಗೇಟುಗಳಿಗೆ ಬೀಗ ಜಡಿಯಲಾಗಿತ್ತು ಉದ್ಯಾನದ ಎಲ್ಲಾ ಪ್ರವೇಶದ್ವಾರಗಳಲ್ಲೂ ವಾಹನಗಳು ಪ್ರವೇಶಿಸದಂತೆ ಬ್ಯಾರಿಕೇಡ್ ಗಳನ್ನು ಅಡ್ಡಲಾಗಿಟ್ಟಿದ್ದರು.

ಮುಂದಿನ ಎರಡೂ ಭಾನುವಾರಗಳಲ್ಲೂ ಇದೇ ರೀತಿ ಜನರಿಗೆ ಸಂದೇಶ ಮತ್ತು ಸೂಚನೆ ನೀಡುವ ಮೂಲಕ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗುವುದು. ಇಷ್ಟೇ ಅಲ್ಲದೇ ಇನ್ನೇನು ಮೆಟ್ರೋ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಕಾಮಗಾರಿ ಮುಕ್ತಾಯಗೊಂಡ ನಂತರ ಶನಿವಾರ ಮತ್ತು ಭಾನುವಾರ ಎರಡೂ ದಿನಗಳು ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸುವ ಚಿಂತನೆಯಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶ ಮಹಾಂತೇಶ್ ಮುರಗೋಡ್ ಹೇಳಿದ್ದಾರೆ.

SCROLL FOR NEXT