ಜಿಲ್ಲಾ ಸುದ್ದಿ

ದಲಿತ ಎಂಬ ಕಾರಣಕ್ಕೆ ವ್ಯವಹಾರದಿಂದ ಕೈಬಿಟ್ಟರು

Mainashree

ಬೆಂಗಳೂರು: ದಲಿತ ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ವ್ಯವಹರಿಸಲು ಇಚ್ಛಿಸದ ಸವರ್ಣೀಯರು ದಲಿತ ಕೆ. ಶ್ರೀನಿವಾಸ್ ಎಂಬುವರನ್ನು ಪಾಲುದಾರಿಕೆಯಿಂದ ದೂರ ಮಾಡಿ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ ಲಲಿತಾನಾಯಕ್ ಅವರು ಆರೋಪಿಸಿದ್ದಾರೆ.

ವಂಚನೆಗೊಳಗಾದ ಶ್ರೀನಿವಾಸ್ ಪರವಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಲಲಿತಾನಾಯಕ್, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಉದ್ದೇಶದೊಂದಿಗೆ ಸುಬ್ರಹ್ಮಣ್ಯಂ, ಮಧುಸೂಧನ್ ಹಾಗೂ ಕೆ. ಶ್ರೀನಿವಾಸ್ ಸೇರಿ ಜಮೀನು ಖರೀದಿಸಿದ್ದಾರೆ. ಬಳಿಕ ಆತ ದಲಿತ ಸಮುದಾಯಕ್ಕೆ ಸೇರಿದವನು ಎಂಬುದು ತಿಳಿದ ನಂತರ ಶ್ರೀನಿವಾಸರನ್ನು ವ್ಯವಹಾರಿಕವಾಗಿ ದೂರ ಮಾಡಿದರು. ಯಾಕೆ ಎಂದು ಪ್ರಶ್ನಿಸಿದಾಗ ನೀನು ದಲಿತ ಸಮುದಾಯಕ್ಕೆ ಸೇರಿದ್ದರಿಂದ ನಮ್ಮ ಸರಿ ಸಮಾನಾಗಿ ವ್ಯವಹರಿಸುವ ಯೋಗ್ಯತೆ ನಿನಗಿಲ್ಲ ಎಂದು ನೇರವಾಗಿ ನಿಂದಿಸಿದ್ದಲ್ಲದೆ ಅವಾಚ್ಯ ಶಬ್ಧಗಳಿಂದ ಬೈದಿದಿದ್ದಾರೆ.

ಇದರಿಂದ ಬೇಸತ್ತ ಶ್ರೀನಿವಾಸ್ ಜಮೀನು ಖರೀದಿಗೆ ವಿನಿಯೋಗಿಸಿದ್ದ ಷೇರಿನ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಇದಕ್ಕೆ ಒಪ್ಪದ ಸುಬ್ರಹ್ಮಣ್ಯಂ ಹಾಗೂ ಮಧುಸೂಧನ್ ಕೇವಲ 9 ಲಕ್ಷ ರುಪಾಯಿ ಕೊಡುವುದಾಗಿ ಹೇಳಿ ಚೆಕ್ ನೀಡಿದ್ದಾರೆ. ಆದರೆ ಆ ಚೆಕ್ ಬೌನ್ಸ್ ಆಗಿದೆ. ಇದರಿಂದಾಗಿ ಶ್ರೀನಿವಾಸ್ ಅವರು ಕಾನೂನು ಸಮರಕ್ಕೀಳಿದಿದ್ದಾರೆ. ಬಳಿಕ ಮಾತುಕತೆ ಮೂಲಕ ಸಮಸ್ಯೆ ಬಗೆ ಅರಿಸಿಕೊಳ್ಳುವುದಾಗಿ ಹೇಳಿದ ಇಬ್ಬರು ಅವರು ಇಂದಿರಾನಗರದ ಅಡಿಗಾಸ್ ಹೊಟೇಲ್ ಗೆ ಬರುವಂತೆ ಹೇಳಿದ್ದರು. ಈ ವೇಳೆಗಾಗಲೇ ಶ್ರೀನಿವಾಸ್ ಆರೋಗ್ಯ ಏರುಪೇರಾಗಿದ್ದರಿಂದ ಮಾತುಕತೆಗಾಗಿ ಅವರ ಭಾಮೈದ ಸುರೇಶ್ ಕುಮಾರ್ ರನ್ನು ಕಳುಹಿಸಿದ್ದಾರೆ. ಆದರೆ ಮಾತುಕತೆ ವೇಳೆ ಹಣ ನೀಡುವುದರ ಬದಲಿಗೆ ಗೂಂಡಗಳ ಕೈಯಿಂದ ಬೆದರಿಸಿ, ಜಾತಿ ನಿಂದನೆ ಮಾಡಿದ್ದಾರೆ. ಈ ಘಟನೆ ನಂತರ ಶ್ರೀನಿವಾಸ್ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕೈಗೊಂಡು, ನ್ಯಾಯಾ ಒದಗಿಸಿಕೊಡಬೇಕು ಹಾಗೂ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಜಾತಿ ನಿಂದನೆ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ಭಾರತೀಯ ಅಂಬೇಡ್ಕರ್ ಜನತಾಪಕ್ಷದ ರಾಜಾಧ್ಯಕ್ಷ ಮಂಜುನಾಥ್, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್. ಅಶ್ವಥನಾರಾಯಣ, ಭಾರತ ಜನಜಾಗೃತಿ ಸೇನೆ ರಾಜ್ಯಾಧ್ಯಕ್ಷ ಸಿ. ಮುನಿಯಪ್ಪ, ದಲಿತ ಮುಖಂಡ ಬಿ. ರಮೇಶ್. ವಂಚನೆಗೊಳಗಾದ ಕೆ. ಶ್ರೀನಿವಾಸ್ ಅವರ ಅಳಿಯ ಸುರೇಶ್ ಕುಮಾರ್ ಹಾಜರಿದ್ದರು.

SCROLL FOR NEXT