ಬೆಂಗಳೂರು: ಡಿನೋಟಿಫಿಕೇಷನ್ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜೂ. 6ರವರೆಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ಬೆಂಗಳೂರಿನ ಆರ್.ಟಿ. ನಗರದ ಗಂಗೇನಹಳ್ಳಿಯಲ್ಲಿ 1 ಎಕರೆ 11 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಪಾಟೀಲ್ ಮೇ 5ರಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸೇರಿ ಐವರ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಭ್ರಷ್ಟಚಾರ ನಿಗ್ರಹ ಕಾಯ್ದೆ ,13 (1) ಸಿ, 13 (1) ಡಿ, 13 (2) ಮತ್ತು ಐಪಿಸಿ 409, 418, 420 ಮತ್ತು 120 ಬಿ ಅನ್ವಯ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿತ್ತು.
ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಬೋಪಯ್ಯ ಅವರು ಅರ್ಜಿದಾರರಿಗೆ ಜೂನ್ 6ರವರೆಗೂ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ತನಿಖಾಧಿಕಾರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಆರೋಪಿಯು ಬಂಧನಕ್ಕೊಳಗಾದರೆ ರು.5 ಲಕ್ಷ ಬಾಂಡ್ ನೀಡಿ ಬಿಡುಗಡೆ ಆಗಬೇಕು. ತನಿಖಾಕಿರೆಗ ಸಹಕರಿಸಬೇಕು. ಸಾಕ್ಷಿ ಹಾಗೂ ದಾಖಲೆಗಳನ್ನು ನಾಶಪಡಿಸಬಾರದು. ತನಿಖಾಧಿಕಾರಿಯ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಷರತ್ತು ವಿಧಿಸಿ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.