ಬೆಂಗಳೂರು: ನಗರದಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ 23 ಮರಗಳಿಗೆ ಹಾನಿಯಾಗಿದೆ. ಕೆಲವೆಡೆ ಕೊಂಬೆಗಳು ಧರೆಗುರುಳಿದ್ದು, ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಶುಕ್ರವಾರ ಬೀಸಿದ ಬಿರುಗಾಳಿ ಹಾಗೂ ಮಳೆಯಿಂದ ರಸ್ತೆ, ಪಾದಚಾರಿ ಮಾರ್ಗ, ಶಾಲೆಗಳ ಕಂಪೌಂಡ್ಗಳು ಹಾನಿಗೊಳಪಟ್ಟಿವೆ. ಪಾದಚಾರಿ ಮಾರ್ಗ ಹಾಗೂ ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯುಂಟಾಯಿತು. ಬಿಬಿಎಂಪಿ ಅರಣ್ಯ ಘಟಕದ ಗುತ್ತಿಗೆದಾರರಿಗೆ ಬಿಬಿಎಂಪಿ ಬಾಕಿ ನೀಡುವುದಾಗಿ ಭರವಸೆ ನೀಡಿರುವುದರಿಂದ ಗುತ್ತಿಗೆದಾರರ ಮುಷ್ಕರ ಸದ್ಯಕ್ಕೆ ನಿಂತಿದ್ದು ಕಾರ್ಯಾಚರಣೆ ಚುರುಕುಗೊಂಡಿದೆ,
ಅರಣ್ಯ ಘಟಕದ ವಿವಿಧ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಮರ ಕತ್ತರಿಸಿ ತೆರವು ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಹೆಚ್ಚಿನ ಸಿಬ್ಬಂದಿ ಹಾಗೂ ಯಂತ್ರ ಸಲಕರಣೆ ಪಡೆಯುವಂತೆ ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಸೂಚಿಸಿದ್ದು, ಕಾರ್ಯಾಚರಣೆ ವೇಗವಾಗಿ ಸಾಗಿದೆ.
ಇಂದಿರಾನಗರ 80 ಅಡಿ ರಸ್ತೆ ಶೇಷಾದ್ರಿ ಪುರದ ಕಿನೋ ಚಿತ್ರಮಂದಿರ, ಅಲಸೂರು ಬಳಿಯ ಗುಪ್ತಾ ಬಡಾವಣೆ, ಡೈರಿ ವೃತ್ತ, ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಾಲಯ ಬಳಿ, ಪ್ರಶಾಂತ ನಗರದ ಶೋಭಾ ಆಸ್ಪತ್ರೆ ಬಳಿ, ಗುಟ್ಟಹಳ್ಳಿ, ಪ್ಯಾಲೇಸ್ ರಸ್ತೆ, ಜಯನಗರದ ಈಸ್ಟ್ ಎಂಡ್ ಬಳಿ, ಆನೇ ಪಾಳ್ಯ, ನವರಂಗ, ಕೆ.ಜೆ ಹಳ್ಳಿಯ ರೈಲ್ವೆ ಕ್ರಾಸಿಂಗ್ ವಸಂತನಗರದ ಕೊಡವ ಸಮಾಜ ಬಳಿ, ರೆಸಿಡೆನ್ಸಿ ರಸ್ತೆ ಬಳಿ ಸೇರಿದಂತೆ ಒಟ್ಟು 234 ಮರ ಹಾಗೂ ಕೊಂಬೆಗಳು ನೆಲಕ್ಕುರುಳಿವೆ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿಯ ಸಿಬ್ಬಂದಿ ತಿಳಿಸಿದ್ದಾರೆ.