ಬೆಂಗಳೂರು: ಪಾರ್ಕ್ ಮತ್ತು ಆಟದ ಮೈದಾನವನ್ನು ಬೇರೆ ಉದ್ದೇಶಕ್ಕೆ ಬಳಸಬಾರದೆಂಬ ನಿಯಮವಿದ್ದರೂ ಜಯನಗರದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಕಾನೂನು ದುರ್ಬಳಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಮೇಶ್ ನಿಯಮ ಉಲ್ಲಂಘಿಸಿ ರೋಸ್ ಗಾರ್ಡನ್ ನಿರ್ಮಿಸುತ್ತಿದ್ದಾರೆ. ಮಾತ್ರವಲ್ಲ ಅಲ್ಲಿ ಜಿಮ್ನಾಷಿಯಂ ನಿರ್ಮಿಸಿದ್ದಾರೆ. ಪಾರ್ಕ್ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಬಾರದೆಂದು ಹೈಕೋರ್ಟ್ ಆದೇಶಿಸಿದ್ದರೂ ಉಲ್ಲಂಘಿಸಿಲಾಗಿದೆ ಎಂದರು. ರಮೇಶ್ ಅವರು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬೇಕು.ಬೆಂಗಳೂರು ಹಾಳಾಗುವುದಕ್ಕೆ ಡೆವಲಪರ್ ಗಳು ಕಾರಣ. ಹೊರ ರಾಜ್ಯದ ಡೆವಲಪರ್ ಗಳು ಬೆಂಗಳೂರನ್ನು ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ಆರೋಪಿಸಿದರು.
ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅನಗತ್ಯವಾಗಿ ಆರೋಪಿಸುವುದನ್ನು ನಿಲ್ಲಿಸಬೇಕು. ಬಿಬಿಎಂಪಿಯಲ್ಲಿ ಅಧಿಕಾರ ನಡೆಸುವ ಸಂದರ್ಭದಲ್ಲಿ ನೀವು ಮಾಡಿ ಅಕ್ರಮವನ್ನು ತೊಳೆಯುವುದಕ್ಕೆ ಸರ್ಕಾರ ಯತ್ನಿಸುತ್ತಿದೆ. ಈ ಕಾರಣಕ್ಕಾಗಿಯೇ ಉತ್ತಮ ಆಡಳಿತಾಧಿಕಾರಿಗಳನ್ನು ಹಾಕಲಾಗಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದವರ್ಯಾರೂ ಬಿಬಿಎಂಪಿ ಬಗ್ಗೆ ಮಾತನಾಡುತ್ತಿಲ್ಲ. ಜಗದೀಶ್ ಶೆಟ್ಟರ್ ಅವರಂಥವರು ಮಾತ್ರ ಆರೋಪಿಸುತ್ತಿದ್ದಾರೆ. ಕೆಂಪೇಗೌಡ ಮ್ಯೂಸಿಯಂ ಅನ್ನು ಒತ್ತೆ ಇಟ್ಟವರಿಗೆ ಕೆಂಪೇಗೌಡರ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಎಂದು ಕುಟುಕಿದರು.