ಜಿಲ್ಲಾ ಸುದ್ದಿ

ಮರಳು ಮಾಫಿಯಾ ವಿರುದ್ಧ ಗೂಂಡಾ ಕಾಯ್ದೆ

Sumana Upadhyaya

ಬೆಂಗಳೂರು: ಮರಳು ಮಾಫಿಯಾ ತಡೆಗೆ ಗೂಂಡಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಾಮರಾಜನಗರ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರ ವರ್ಗದ ಮೇಲೆ ಮರಳು ದಂಧೆಕೋರರು ನಡೆಸುತ್ತಿರುವ ಗೂಂಡಾಗಿರಿ ಮತ್ತು ರಾಜ್ಯದ ಸಂಪತ್ತು ಲೂಟಿ ತಡೆಯುವುದಕ್ಕೆ ಗೂಂಡಾ ಕಾಯ್ದೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಾರ್ಷಿಕ ಮರಳು ಬೇಡಿಕೆ ಪ್ರಮಾಣ 23 ದಶಲಕ್ಷ ಟನ್‍ಗಳಷ್ಟಿದೆ. ಆದರೆ ಈ ಪೈಕಿ ನಮಗೆ ಎಂಟು ದಶಲಕ್ಷ ಟನ್‍ಗಳಷ್ಟು ಮರಳು ಮಾತ್ರ ಸಿಗುತ್ತಿದೆ.ಈ ಕಾರಣಕ್ಕಾಗಿ ನಾವು ಎಂ.ಸ್ಯಾಂಡ್(ಜಲ್ಲಿ ಪುಡಿ) ಯನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ.ನಾಲ್ಕರಿಂದ ಐದು ಲಕ್ಷ ಟನ್‍ಗಳಷ್ಟು ಎಂ.ಸ್ಯಾಂಡ್ ಸಿಗುತ್ತಿದೆ. ಇನ್ನೂ ಹಲವು ಕಡೆ ಜಲ್ಲಿ ಪುಡಿಗೆ ಅನುಮತಿ ನೀಡುವ ಮೂಲಕ ಹೆಚ್ಚು ಎಂ.ಸ್ಯಾಂಡ್ ಉತ್ಪಾದಿಸಿ ಬೇಡಿಕೆ ತಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ರಸ್ತೆ ಗುಂಡಿ ಮುಚ್ಚುವ ಕಾರ್ಯ ರಾಜ್ಯಾದ್ಯಂತ ಭರದಿಂದ ಸಾಗಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ.ಇದಕ್ಕಾಗಿ ಉತ್ತರ ಹಾಗೂ ದಕ್ಷಿಣ ಭಾಗದ ಮುಖ್ಯ ಎಂಜಿನಿಯರುಗಳಿಗೆ ತಲಾ 250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ರಾಜ್ಯದ ರಸ್ತೆಗಳಲ್ಲಿದ್ದ ಒಂಭತ್ತು ಸಾವಿರ ಹಂಪುಗಳ ಪೈಕಿ ಎಂಟು ಸಾವಿರದಷ್ಟು ಹಂಪುಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.

ಬೆಂಗಳೂರು-ಮೈಸೂರು 6 ಪಥ ರಸ್ತೆ: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಕಾಮಗಾರಿ 2016ರ ಮಾರ್ಚ್‍ನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದು ಷಟ್ಪಥ ಸಿಮೆಂಟ್ ಕಾಂಕ್ರೀಟ್ ರಸ್ತೆ, ಇಕ್ಕೆಲಗಳಲ್ಲಿ ಸರ್ವಿಸ್ ರೋಡ್ ಒಳಗೊಂಡಿರುತ್ತದೆ. ಯೋಜನೆಗೆ 5500 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದ್ದು,ಭೂಸ್ವಾಧೀನಕ್ಕೆ  2200 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಬಿಡದಿ-ರಾಮನಗರ, ಚನ್ನಪಟ್ಟಣ-ಮದ್ದೂರು ಹಾಗೂ ಮಂಡ್ಯ ನಗರಗಳ ವ್ಯಾಪ್ತಿಯಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ. ರೈತರ ಭೂಮಿ ಹೆಚ್ಚು ಸ್ವಾಧೀನವಾಗದಂತೆ ಎಚ್ಚರವಹಿಸಲಾಗುವುದು. ಷಟ್ಪಥ ರಸ್ತೆಯಾದರೂ ಸಂಚಾರ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರಿನಿಂದ ಕನಕಪುರಕ್ಕೆ ಚತುಷ್ಪಥ ಕನಕಪುರ-ಮಳವಳ್ಳಿ, ಮಳವಳ್ಳಿ-ಕೊಳ್ಳೇಗಾಲ-ಚಾಮರಾಜನಗರ- ಸತ್ಯಮಂಗಲದವರೆಗೂ ದ್ವಿಪಥ ನಿರ್ಮಿಸಲಾಗುವುದು ಎಂದು ಹೇಳಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡು ಸಾವಿರ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಯಿತು. ಇದೇ ರೀತಿ ಈಗಿನ ಎನ್‍ಡಿಎ ಸರ್ಕಾರಕ್ಕೆ 2218 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲು ಪ್ರಸ್ತಾಪ ಕಳಿಸಲಾಗಿದೆ.ಮತ್ತು ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯದ ಸಚಿವರು, ವಿಧಾನಸಭೆ, ವಿಧಾನಪರಿಷತ್ತಿನ ಅಧ್ಯಕ್ಷರಿಗೆ ಸೇರಿದಂತೆ ನಲವತ್ತಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವ ಉದ್ದೇಶ ಸರ್ಕಾರಕ್ಕಿದ್ದು ಇದಕ್ಕಾಗಿ ನೀಲನಕ್ಷೆಯನ್ನು ತಯಾರಿಸಲಾಗಿದೆ. ವಿಂಡ್ಸರ್ ಮ್ಯಾನರ್ ಬಳಿ ಇರುವ ಜಾಗವೂ ಸೇರಿದಂತೆ ಹಲವೆಡೆ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ದೆಹಲಿಯ ವಿಜ್ಞಾನ ಭವನ ಮಾದರಿಯಲ್ಲಿ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸುವ ಉದ್ದೇಶದೆ.ಇದಕ್ಕಾಗಿ 200 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

SCROLL FOR NEXT