ಜಿಲ್ಲಾ ಸುದ್ದಿ

ಪ್ರೆಸ್ಟೀಜ್ ಕಂಪನಿ ಪರ ಅಶ್ವಿನ್ ಲಾಬಿ: ಹಿರೇಮಠ್ ಆರೋಪ

Srinivas Rao BV

ಹುಬ್ಬಳ್ಳಿ: ಭೂ ಅಕ್ರಮದಲ್ಲಿ ತೊಡಗಿರುವ ಪ್ರೆಸ್ಟೀಜ್ ಕಂಪನಿ ಪರವಾಗಿ ಲೋಕಾಯುಕ್ತ ನ್ಯಾಯಮೂರ್ತಿ ಪುತ್ರ ವೈ.ಅಶ್ವಿನ್ ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದು ವಿಶೇಷ ತನಿಖಾ ತಂಡ ಸೂಕ್ತ ತನಿಖೆ ನಡೆಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರೇಮಠ್, ವೈ.ಅಶ್ವಿನ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ ಅವರನ್ನು ಲೋಕಾಯುಕ್ತ ಅಧಿಕೃತ ಕಚೇರಿಗೆ ಕರೆಸಿಕೊಂಡು ಪ್ರೆಸ್ಟೀಜ್ ಕಂಪನಿ ಪರವಾಗಿ ಕೆಲಸ ನಿರ್ವಹಿಸುವಂತೆ ಒತ್ತಡ ಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರೆಸ್ಟೀಜ್ ಸಂಸ್ಥೆ ಅರಣ್ಯ ಭೂಮಿ ಕಬಳಿಕೆಗೆ ಸಂಬಂಧಪಟ್ಟಂತೆ ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸ್ ಸಂಸ್ಥೆ ಹಲವು ಮಹತ್ವದ ದಾಖಲೆಗಳನ್ನು ಕಲೆ ಹಾಕಿದೆ. ಸಿಬಿಐ ಗೆ ದೂರು ಸಲ್ಲಿಸಿದ ಆನಂತರ ಎರಡನೇ ಹಂತದ ದಾಖಲೆಗಳನ್ನು ಸಿಬಿಐ ಗೆ ನೀಡಿರುವುದಾಗಿ ಹೇಳಿದರು.
ಹೆಚ್ಎಂಟಿ ಕಂಪನಿಯ ಭೂಮಿಯನ್ನು ಪ್ರೆಸ್ಟೀಜ್ ಕಂಪನಿ ತನ್ನ ಪಾಲುದಾರ ಹಾಗೂ ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ ಪರಭಾರೆ ಮಾಡುತ್ತಿದೆ. ಇದು ಕಂದಾಯ ಇಲಾಖೆಗಳ ಒತ್ತಡ ಎಂಬುದು ಸಾಬೀತಾದಂತೆ. ಹಾಗಾಗಿ ಸಿಬಿಐ ತನಿಖೆಯನ್ನು ಚುರುಕುಗೊಳಿಸುವಂತೆ ಹಿರೇಮಠ ಒತ್ತಾಯಿಸಿದ್ದಾರೆ.
ಎರಡನೇ ಹಂತದ ದಾಖಲೆಗಳಲ್ಲಿ ಹೆಚ್ಎಂಟಿ ಕಂಪನಿ ಸರ್ಕಾರದ ಭೂಮಿಯನ್ನು ಕ್ರಮವಾಗಿ ಪರಭಾರೆ ಮಾಡಿದ 20 ಕಂಪನಿಗಳ ವಿವರಗಳನ್ನು ಸಿಬಿಐ ಗೆ ನೀಡಲಾಗಿದೆ. ಸಿಬಿಐ ನಡೆಸುತ್ತಿರುವ ತನಿಖೆಗೆ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಹಿಂದೆ ಸರ್ಕಾರದ ಭೂಮಿಯನ್ನು ಅನುಮತಿ ಇಲ್ಲದೇ ಪರಭಾರೆ ಮಾಡುವುದನ್ನು ಅಥವಾ ಮಾರಾಟ ಮಾಡುವುದನ್ನು ರಿಜಿಸ್ಟರ್ ಮಾಡಂದತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ. ಇಷ್ಟೆಲ್ಲಾ ನಿಯಮಾವಳಿಗಳು ಇದ್ದರೂ ಅಕ್ರಮವಾಗಿ ಹೆಚೆಂಟಿ ಕಂಪನಿಯ ಆಸ್ತಿಯನ್ನು ಪರಭಾರೆ ಮಾಡಿದ್ದಾರೆ. ಮತ್ತಷ್ಟು ದಾಖಲೆಗಳನ್ನು ಪಡೆದು ಸಿಬಿಐ ಶೀಘ್ರದಲ್ಲೇ ನಿರ್ದಾಕ್ಷಿಣ್ಯವಾಗಿ ತನಿಖೆ ಆರಂಭಿಸುವಂತೆ ಒತ್ತಾಯಿಸಿದ್ದಾರೆ.  

SCROLL FOR NEXT