ಜಿಲ್ಲಾ ಸುದ್ದಿ

ಚರ್ಚೆ ನಿಲ್ಲಿಸಿ, ಮಾಸ್ಕ್ ನೀಡಿ

Srinivasamurthy VN

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಆಂದೋಲನವನ್ನು ಮಾಸ್ಕ್ ಹಾಕಿಕೊಂಡು ಮಾಡುತ್ತಾರೆ. ಆದರೆ, ದಿನನಿತ್ಯ ಹಗಲು ರಾತ್ರಿ ದುಡಿಯುವ ಬಿಬಿಎಂಪಿ ಪೌರ ಕಾರ್ಮಿಕರು ಶೂ, ಮಾಸ್ಕ್ ಮತ್ತು ಕೈಗವಸುಗಳಿಲ್ಲದೆ ನಗರದ ಸ್ವಚ್ಛತೆ ಮಾಡಬೇಕಾಗಿದೆ. ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ಇನ್ನಾದರೂ ಗೋಮಾಂಸ ಮತ್ತು ಹಂದಿ ಮಾಂಸದ ಬಗ್ಗೆ ಅನಗತ್ಯ ಚರ್ಚೆ ಮಾಡುವುದನ್ನು ಬಿಟ್ಟು ಪೌರ ಕಾರ್ಮಿಕರಿಗೆ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಜಯಪ್ರಕಾಶ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ ಶಿವಕುಮಾರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ವಚ್ಛತೆಗೆ ದುಡಿಯುತ್ತಿರುವ ಪೌರಕಾರ್ಮಿಕರು ಅನೇಕ ರೋಗರುಜಿನಗಳಿಂದ ನರಳುತ್ತಿದ್ದಾರೆ. ಹೊಲಸಿನಲ್ಲಿ ಬರಿಗಾಲಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಕಾಲುಗಳು ಕೊಳೆಯುತ್ತಿವೆ. ಚರ್ಮರೋಗ, ಶಾಸ್ವಕೋಶ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿ ಇಎಸ್‍ಐ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ವೈದ್ಯರು ಕಾರ್ಮಿಕರನ್ನು ಮುಟ್ಟಿ ಪರೀಕ್ಷಿಸದೇ, ದೂರದಿಂದಲೇ ನೋಡಿ ಔಷಧ ಬರೆದುಕೊಟ್ಟು ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದೂರಿದರು.

ಬಿಬಿಎಂಪಿಯಲ್ಲಿ ಪೌರಕಾರ್ಮಿಕರನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿ-ಕೊಳ್ಳಲಾಗುತ್ತಿದೆ. ರು.6 ಸಾವಿರ ಸಂಬಳಕ್ಕೆ ಜೀವವನ್ನೇ ಒತ್ತೆಯಿಟ್ಟು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬರುವ ರು.6 ಸಾವಿರ ಸಂಬಳದಲ್ಲಿ ಮನೆ ಬಾಡಿಗೆ, ಮಕ್ಕಳ ಶಾಲೆ ಫೀಜ್ ಕಟ್ಟಲಿಕ್ಕೆ ಹೇಗೆ ಸಾಧ್ಯ ಎಂಬು ದನ್ನು ಜನಪ್ರತಿನಿಧಿಗಳು ಯೋಚಿಸಬೇಕು. ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಬೇಕು.

ಕೂಡಲೇ ಕನಿಷ್ಠ ರು.15 ಸಾವಿರ ಸಂಬಳ ಕೊಡಬೇಕು. ಕಾಂಗ್ರೆಸ್ ಪಕ್ಷದವರು ಹಿಂದುಳಿದವರು, ಅಲ್ಪಸಂಖ್ಯಾಂತರ ಬಗ್ಗೆ; ಬಿಜೆಪಿ ನಾಯಕರು ಬಹುಸಂಖ್ಯಾತರ ಬಗ್ಗೆ ಮಾತನಾಡುತ್ತ ಓಲೈಕೆ ರಾಜಕಾರಣ ಬಿಟ್ಟು ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

SCROLL FOR NEXT