ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ವಿಚಾರದಲ್ಲಿ ಸ್ವತಃ ಸಚಿವ ಆಂಜನೇಯ ಅವರ ಪತ್ನಿಯೇ ಲಂಚ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೇ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ರಾಜಿನಾಮೆಗಾಗಿ ಪ್ರಬಲ ಸೊಲ್ಲೆದ್ದಿದ್ದು, ಎಲ್ಲೆಡೆ ಪ್ರತಿಭಟನೆಯ ಕೂಗು ಕೇಳಿಬರುತ್ತಿದೆ.
ಇಲಾಖೆಯ ಅವ್ಯವಹಾರವನ್ನು ಸಚಿವ ಆಂಜನೇಯ ಅವರ ಮನೆಯಲ್ಲೇ ಸುವರ್ಣ ನ್ಯೂಸ್ ಕುಟುಕು ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ನಾಗರಿಕ ವೇದಿಕೆಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿವೆ. ಸಚಿವರ ತವರು ಜಿಲ್ಲೆ ಚಿತ್ರದುರ್ಗದಲ್ಲೂ ಸಂಘ ಸಂಸ್ಥೆಗಳು ಬೀದಿಗಿಳಿದಿದ್ದವು. ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಪ್ರತಿಭಟಿಸಿ ಸಿಒಡಿ ತನಿಖೆಗೆ ಒತ್ತಾಯಿಸಿವೆ. ವಿಜಯಪುರ ಹಾಗೂ ಬಾಗಲಕೋಟೆ, ಮೈಸೂರು, ತುಮಕೂರು ಭಾಗದಲ್ಲಿಯೂ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಹಾಗೂ ಎಬಿವಿಪಿ ಪ್ರತಿಭಟಿಸಿದೆ. ಬೆಳಗಾವಿಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಚಿವರ ಪರವಾಗಿದ್ದು, ಆಂಜನೇಯ ಅವರನ್ನು ಸಂಪುಟದಿಂದ ಕೈಬಿಟ್ಟರೆ ಹೋರಾಟ ನಡೆಸುವುದಾಗಿ ಡಿಸಿಗೆ ಮನವಿ ಸಲ್ಲಿಸಿತು. ಇನ್ನೂ ಕೆಲವು ಕಡೆ ಸಚಿವರ ಪರವಾಗಿಯೂ ಪ್ರತಿಭಟನೆಗಳು ನಡೆದಿವೆ.