ಬಂಟಕಲ್ಲು: ಎರಡು ವರ್ಷಗಳ ಹಿಂದೆ ಮಂಗಳ ಗ್ರಹದ ಕಕ್ಷೆಗೆ ಕಳುಹಿಸಲಾಗಿರುವ `ಮಾಮ್' ಉಪಗ್ರಹವು ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ಮಾಮ್ - 2ನ್ನು ಕಳುಹಿಸುವುದಕ್ಕೆ ಸಿದ್ಧತೆಗಳಾಗುತ್ತಿವೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.
ಎಸ್ ಎಂ ವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗಾಗೂ ಮಾನೇಜ್ ಮೆಂಟ್ ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂದಿನ ಕೆಲವೇ ವರ್ಷಗಳಲ್ಲಿ ಶುಕ್ರ ಗ್ರಹ ಕಕ್ಷೆಗೆ ಉಪಗ್ರಹವೊಂದನ್ನು ಕಳುಹಿಸುವುದಕ್ಕೆ ಭಾರತ ಯೋಜಿಸುತ್ತಿದೆ. ಸೂರ್ಯನ ಬಗ್ಗೆ ಅಧ್ಯಯನಕ್ಕೆ ಆದಿತ್ಯ ಯೋಜನೆ ರೂಪತಳೆಯುತ್ತಿದೆ ಎಂದರು. ಇಸ್ರೋ ಇನ್ನು ಮುಂದೆ ಆರ್ಥಿಕವಾಗಿ ಸ್ವಾವಲಂಭಿಯಾಗಲು ಪ್ರತಿ ವರ್ಷ 10 ರಿಂದ 15 ಉಪಗ್ರಹಗಳನ್ನು ಕಳುಹಿಸುವುದಕ್ಕೆ ಯೋಚಿಸಿದೆ. ಇಸ್ರೋ ಇನ್ನು ಮುಂದೆ ಮೀನುಗಾರರಿಗೆ ಸಮುದ್ರದಲ್ಲಿ ಮೀನಿನ ಪತ್ತೆಗಾಗಿ, ರೈತರಿಗೆ ಹವಾಮಾನ ವರದಿಗಾಗಿ, ಸೇನೆಯ ಸಹಾಯಕ್ಕಾಗಿಯೂ ಬಳಕೆಯಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಕಾಲೇಜು ಮಂಡಳಿಯ ಅಧ್ಯಕ್ಷ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಇಸ್ರೋ ಅಧ್ಯಕ್ಷರನ್ನು ಸನ್ಮಾನಿಸಿದರು.