ಬೆಂಗಳೂರು: ಬೆಂಗಳೂರಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ರಸ್ತೆ ಗುಂಡಿ ಮುಚ್ಚಲು ಪಾಲಿಕೆ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ನಾಲ್ಕು ಟಾರ್ ಪ್ಲ್ಯಾಂಟ್‍ಗಳ ನಿರ್ಮಾಣಕ್ಕೆ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾನಗರ ಪಾಲಿಕೆ ಆಯುಕ್ತ ಜಿ.ಕುಮಾರನಾಯಕ್, ಮುಂದಿನ 23 ದಿನಗಳಲ್ಲಿ ಟಾರ್ ಪ್ಲ್ಯಾಂಟ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತಿದೆ. ಆನೇಕಲ್ ತಾಲೂಕು, ರಾಜರಾಜೇಶ್ವರಿ ನಗರ ಸಮೀಪದ ಗೊಲ್ಲಹಳ್ಳಿ, ಮಲ್ಲಸಂದ್ರ ಮತ್ತು ಕಣ್ಣೂರುಗಳಲ್ಲಿ ಪ್ಲ್ಯಾಂಟ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ.
ಪ್ಲ್ಯಾಂಟ್ ನಿರ್ಮಾಣವಾದರೆ ನಗರದ ರಸ್ತೆ ಗುಂಡಿಗಳಲ್ಲಿ ತಕ್ಷಣವೇ ಮುಚ್ಚಲು ಸಹಾಯವಾಗುತ್ತದೆ. ಈ ಮೂಲಕ ನಗರದ ರಸ್ತೆಗಳು ಗುಂಡಿ ಬೀಳುವ ಮುನ್ನವೇ ಎಚ್ಚೆತ್ತುಕೊಂಡು ಆರಾಮದಾಯಕ ಸಂಚಾರಕ್ಕೆ ಅನುವು ಮಾಡಿಕೊಡುವುದು ಪಾಲಿಕೆ ಉದ್ದೇಶ ಎಂದು ಹೇಳಿದರು.
ಪ್ಲ್ಯಾಂಟ್‍ಗಳ ನಿರ್ಮಾಣಕ್ಕೆ ಬೇಕಾಗುವ ಅನುದಾನ ಒದಗಿಸಲು ಪಾಲಿಕೆ ಕ್ರಮ ಕೈಗೊಳ್ಳಲಿದೆ. ಕಳೆದು ಒಂದು ವಾರದಿಂದ ಉಂಟಾದ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ರಸ್ತೆಗಳು ಹಾಳಾಗಿವೆ. ರಸ್ತೆ ಗುಣಮಟ್ಟ ಕಾಯ್ದುಕೊಳ್ಳಲು ಮುಖ್ಯ ಎಂಜಿನಿಯರ್ ಜತೆ ಚರ್ಚೆ ನಡೆಸಿದ್ದು, ಆದಷ್ಟು ಶೀಘ್ರದಲ್ಲೇ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.