ಬೆಂಗಳೂರು: ಮಡಿಕೇರಿಯಲ್ಲಿ ಗಲಭೆಯನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವುದರ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಕಾನೂನು ಕೈಗೆತ್ತಿಕೊಂಡರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವೊಂದು ವಿಚಾರಗಳ ಬಗ್ಗೆ ಪ್ರತಿಪಕ್ಷ ನಾಯಕರು ಟೀಕೆ ಟಿಪ್ಪಣಿ ಮಾಡಲಿ, ಅಗತ್ಯವಿದ್ದರೆ ನಾವು ತಿದ್ದುಕೊಳ್ಳಬಹುದು. ಆದರೆ ಪ್ರತಿಯೊಂದು ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು ಎಂದರು. ಹಿಂದೂ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬೇಕಾದರೆ ಸದನದಲ್ಲಿ ವಿಚಾರ ಪ್ರಸ್ತಾಪ ಮಾಡಲಿ. ಅಲ್ಲಿ ಸಮರ್ಪಕ ಉತ್ತರ ನೀಡುತ್ತೇವೆ. ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಗತ್ಯ ಬಿದ್ದರೆ ನ್ಯಾಯಾಂಗ ತನಿಖೆ: ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ಗುರುವಾರ ಭೇಟಿ ನೀಡಿ, ಗುಂಡೇಟಿನಿಂದ ಮೃತಪಟ್ಟ ಸಾಹುಲ್ ಹಮೀದ್ ಮೃತದೇಹ ವೀಕ್ಷಿಸಿದ ಮಡಿಕೇರಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಡಿಕೇರಿಯಲ್ಲಿ ಶಾಂತಿ ಕದಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ಹೇಳಿದರು. ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಡೆದ ಗಲಭೆ ದುರಾದೃಷ್ಟಕರ. ಶಾಂತಿ ಕದಡುವವರ ವಿರುದಟಛಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಘಟನೆಯಲ್ಲಿ ಕುಟ್ಟಪ್ಪ ಮತ್ತು ಸಾಹುಲ್ ಹಮೀದ್ ಮೃತಪಟ್ಟಿದ್ದು ಬೇಸರ ಉಂಟಾಗಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆ. ನಾವು ಯಾರನ್ನೂ ಓಲೈಸಲು ಬಂದಿಲ್ಲ. ಇಂತಹ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಗತ್ಯ ಬಿದ್ದರೆ ನ್ಯಾಯಾಂಗ ತನಿಖೆ ನಡೆಸಲಾಗುವುದು. ಈಗ ಮಡಿಕೇರಿಯಲ್ಲಿ ಶಾಂತಿ ನೆಲಸಲು ಮೊದಲ ಆದ್ಯತೆ ನೀಡಲಾಗುವುದು. ಇಲ್ಲಿನ ವಸ್ತು ಸ್ಥಿತಿಯನ್ನು ಪರಾಮರ್ಶಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಅವರು ತಿಳಿಸಿದರು. ಪರಿಸ್ಥಿತಿಯ ಅರಿವಿದ್ದರೂ ಜಿಲ್ಲಾ„ಕಾರಿಗಳು ರಜೆಯ ಮೇಲೆ ತೆರಳಿದ್ದು ಏಕೆ ಎಂಬುದು ಗೊತ್ತಿಲ್ಲ. ಈ ಸಂಬಂಧ ಪೊಲೀಸರು, ಸ್ಥಳೀಯ ಸಂಘ- ಸಂಸ್ಥೆಗಳ ಮುಖಂಡರೊಡನೆ ಚರ್ಚಿಸುತ್ತೇನೆ ಎಂದು ಹೇಳಿದರು.