ಜಿಲ್ಲಾ ಸುದ್ದಿ

ಬೆಳ್ಳಂದೂರು, ವರ್ತೂರು ಕೆರೆ ಶುದ್ಧೀಕರಣಕ್ಕೆ ತೀರ್ಮಾನ

Manjula VN

ಬೆಂಗಳೂರು: ಮುಂದಿನ 4-5 ವರ್ಷಗಳಲ್ಲಿ ಒಟ್ಟು 398 ಎಂಎಲ್‍ಡಿ ಸಾಮರ್ಥ್ಯದ ತಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಆರಂಭಿಸುವ ಮೂಲಕ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಸಮಸ್ಯೆ ಪರಿಹರಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ವಿಜಯ ಭಾಸ್ಕರ್ ತಿಳಿಸಿದ್ದಾರೆ.

ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯ ಕುರಿತು ಚರ್ಚಿಸಲು ಸೋಮವಾರ ಕೌನ್ಸಿಲ್ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ವಿಜಯಭಾಸ್ಕರ್, ``ಬೆಳ್ಳಂದೂರು ಕೆರೆಗೆ 25 ಕಿ.ಮೀ. ವ್ಯಾಪ್ತಿಯ 800 ಎಂಎಲ್‍ಡಿ ಕಲುಷಿತ ನೀರು ಸೇರುತ್ತಿದೆ. ಪ್ರಸ್ತುತ 150 ಎಂಎಲ್‍ಡಿ ಸಾಮರ್ಥ್ಯದ ಘಟಕ ನಿರ್ಮಾಣವಾಗುತ್ತಿದೆ. ನಂತರ 248 ಎಂಎಲ್‍ಡಿ ಸಾಮಥ್ರ್ಯದ ಘಟಕ ನಿರ್ಮಾಣವಾಗಲಿದೆ. ನಾಲ್ಕೈದು ವರ್ಷಗಳಲ್ಲಿ ಎಸ್ ಟಿಪಿಗಳ ನಿರ್ಮಾಣ ಪೂರ್ಣಗೊಂಡ ಬಳಿಕ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಬಿಬಿಎಂಪಿಯಿಂದ ಈಗಾಗಲೇ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದು ನೊರೆ ನಿಯಂತ್ರಿಸಲಾಗುತ್ತಿ ದೆ. ಕೆರೆಗಳಿಗೆ ತಂತಿಬೇಲಿ ಹಾಕಲಾಗುತ್ತಿದೆ.

ಜಲಮಂಡಳಿಯಿಂದಲೂ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದು, ನೀರು ಸರಾಗವಾಗಿ ಹರಿಯಲು ರ್ಯಾಂಪ್ ಅಳವಡಿಸಲಾಗುತ್ತದೆ ಎಂದು ತಿಳಿಸಿದರು. ಮಳೆ ಕೊಯ್ಲು ಅಳವಡಿಸದಿದ್ದರೆ ದಂಡ: ಮಳೆ ಕೊಯ್ಲು ಸಮರ್ಪಕವಾಗಿ ಜಾರಿಯಾಗದಿರುವುದನ್ನು ಗಂಬಿsೀರವಾಗಿ ಪರಿಗಣಿಸಿದ ಜಲಮಂಡಳಿ ಅಧ್ಯಕ್ಷರು, ಮಳೆ ಕೊಯ್ಲು ಅಳವಡಿಸಿಕೊಳ್ಳ ದವರಿಗೆ ನೀರಿನ ತೆರಿಗೆಯಲ್ಲಿ ಶೇ.25 ದಂಡ ವಿಧಿಸಲಾಗುವುದು. ಮತ್ತೆ ನಿರ್ಲಕ್ಷಿಸಿದರೆ ಶೇ.50ರಷ್ಟು ದಂಡ ವಿಧಿಸಲಾಗುವುದು ಎಂದರು.

ನೀರಿನ ಬದಲಿಗೆ ಗಾಳಿ

ನೀರು ಸೋರಿಕೆ ಹಾಗೂ ಅನಧಿಕೃತ ಸಂಪರ್ಕಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಪಾಲಿಕೆ ಸದಸ್ಯರು ದೂರಿದರು. ಕಾಂಗ್ರೆಸ್‍ನ ಅಬ್ದುಲ್ ವಾಜೀದ್ ಮಾತನಾಡಿ, ``ತಮ್ಮ ವಾರ್ಡಿನಲ್ಲಿ 5 ಸಾವಿರ ಮನೆಗಳಿಗೆ ಕಾವೇರಿ ನೀರಿಲ್ಲ. 10 ವರ್ಷಗಳ ಹಿಂದೆಯೇ ಪೈಪ್‍ಲೈನ್ ಹಾಕಲಾಗಿದೆಯಷ್ಟೇ. ನಲ್ಲಿ ತಿರುವಿದರೆ ನೀರು ಬದಲು ಗಾಳಿಯೇ ಬರುತ್ತಿದೆ. ಯಾವಾಗ ನೀರು ಪೂರೈಕೆಯಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿ,'' ಎಂದು ಒತ್ತಾಯಿಸಿದರು.

ನೀರಿನ ಮಾಫಿಯಾ
ಬಿಜೆಪಿ ಸದಸ್ಯ ನರಸಿಂಹ ,``ನಗರದಲ್ಲಿ ನೀರಿನ ಮಾಫಿಯಾ ಇದೆ. ವಾರಕ್ಕೆ 2-3 ಬಾರಿ ನೀರು ಕೊಡುತ್ತೇವೆ ಎಂದು ಕಾರ್ಯಪಾಲಕ ಎಂಜಿನಿಯರ್ ಭರವಸೆ ನೀಡಿದ್ದರು. ಆದರೆ, ತಮ್ಮ ವಾರ್ಡಿನ ಮಂಜುನಾಥನಗರದಲ್ಲಿ ಬಹುತೇಕ ಕಾರ್ಮಿಕ ವರ್ಗವೇ ಇದ್ದು ನೀರಿಲ್ಲದೆ ನರಕ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ,'' ಎಂದು ಆರೋಪಿಸಿದರು.

ಒಂದು ಲೋಟ ನೀರಿಲ್ಲ: ಬಿಜೆಪಿಯ ಗುರುಮೂರ್ತಿ ರೆಡ್ಡಿ ಮಾತನಾಡಿ, ಸಭೆ ಆರಂಭದಿಂದಲೂ ಕುಡಿಯಲು ನೀರು ಕೇಳುತ್ತಿದ್ದರೂ, ಒಂದು ಲೋಟ ನೀರು ಸಿಗಲಿಲ್ಲ. ಇನ್ನು ಸಾರ್ವಜನಿಕರಿಗೆ ಹೇಗೆ ನೀರು ಪೂರೈಸಲು ಸಾಧ್ಯ? ಎಂದು ಪ್ರಶ್ನಿಸಿದಾಗ, ಸದಸ್ಯರೆಲ್ಲರೂ ನಗೆಯಲ್ಲಿ ತೇಲಿದರು.

SCROLL FOR NEXT