ಬೆಂಗಳೂರು: ಉದ್ಯಾನ ನಗರದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದ್ದು ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನೇ (ಪಿಟಿ) ಎಲ್‍ಕೆಜಿ ಓದುತ್ತಿದ್ದ ನಾಲ್ಕೂವರೆ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಎಸಗಿದ್ದಾನೆ.
ಮಣಿಪುರ ಮೂಲದ ಶಿಕ್ಷಕ ಕೋರಮಂಗಲದ ಪೇಯಿಂಗ್ ಗೆಸ್ಟ್‍ನಲ್ಲಿ ವಾಸವಿದ್ದ ರೋಮಿಯೋ (24) ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಯೊಂದರಲ್ಲಿ ಬಾಲಕಿ ಕಳೆದ ಎರಡು ವರ್ಷದಿಂದ ವ್ಯಾಸಂಗ ಮಾಡುತ್ತಿದ್ದಳು.
ಐಪಿಸಿ ಕಲಂ 376 ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆ ಅನ್ವಯ ಸೋಮವಾರ ರಾತ್ರಿ ಪ್ರಕರಣ ದಾಖಲಾಗಿದ್ದು ಕೆಲ ಹೊತ್ತಿನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದರು. ಸೋಮವಾರ ಬೆಳಗ್ಗೆ ಶಾಲೆಗೆ ಹೋಗಿದ್ದ ಬಾಲಕಿ ಮಧ್ಯಾಹ್ನ ಶಾಲೆ ಅವಧಿ ಮುಗಿಸಿಕೊಂಡು ಮನೆಗೆ ವಾಪಸಾಗಿದ್ದಳು. ಬಾಲಕಿ ವರ್ತನೆಯಲ್ಲಿ ಬದಲಾವಣೆ ಕಂಡಿದ್ದು ತನ್ನ ದೇಹದ ಖಾಸಗಿ ಜಾಗದಲ್ಲಿ ನೋವಾಗುತ್ತಿದೆ ಎಂದು ಹೇಳಿದ್ದಳು.
ಕೂಡಲೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯಾ್ದಗ ಪರೀಕ್ಷಿಸಿದ ವೈದ್ಯರು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪಾಲಕರಿಗೆ ಹೇಳಿದ್ದರು. ಅಲ್ಲದೇ ಗಂಭೀರ ಸ್ವರೂಪದ ಅಪರಾಧ ಪ್ರಕರಣ ಆಗಿರುವ ಕಾರಣ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಮಾಹಿತಿ ಸಂಗ್ರಹಿಸಿ ಆರೋಪಿಯ ಬಂಧನಕ್ಕೆ ಕಾರ್ಯ ಪ್ರವೃತ್ತರಾಗಿದ್ದರು.
ಸೋಮವಾರ ಬೆಳಗಿನ ಅವಧಿಯಲ್ಲಿ ಶಾಲಾ ಕೊಠಡಿಯೊಳಗೆ ನೊಂದ ಬಾಲಕಿ ಸೇರಿ ಒಟ್ಟು 50 ಮಕ್ಕಳಿಗೆ ಆರೋಪಿ ನೃತ್ಯ ಮಾಡಿಸುತ್ತಿದ್ದ. ಈ ವೇಳೆ ಮಕ್ಕಳು ಕುಣಿಯುತ್ತಾ ಕೂಗಾಡುತ್ತಿದ್ದಾಗ ನೊಂದ ಬಾಲಕಿಯನ್ನು ತಾನಿದ್ದ ಜಾಗದಲ್ಲಿ ಜತೆಯಲ್ಲೇ ನಿಲ್ಲಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಡಿಸಿಪಿ ರೋಹಿಣಿ ತಿಳಿಸಿದರು.
ಘಟನೆ ನಡೆದು ಕೆಲ ಹೊತ್ತಿನಲ್ಲೇ ಆರೋಪಿಯನ್ನು ಬಂಧಿಸಿದ ಪೊಲೀಸರು ಆರೋಪಿ ರೋಮಿಯೋ ಹಿನ್ನೆಲೆಯ ಬಗ್ಗೆ ಪೂರ್ವಪರ ಪರಿಶೀಲಿಸುವ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಪ್ರಶ್ನಿಸಲಾಗಿದೆ. ಒಟ್ಟು 60 ಪೂರ್ಣ ಪ್ರಮಾಣದ ಸಿಬ್ಬಂದಿ, ಜತೆಗೆ ನಾಲ್ವರು ಅತಿಥಿ ಶಿಕ್ಷಕರನ್ನು ನೇಮಿಸಿ ಕೊಳ್ಳಲಾಗಿದ್ದು, ರೋಮಿಯೋ ಸಹಒಬ್ಬ. ಪೂರ್ಣ ಪ್ರಮಾಣದ ಶಿಕ್ಷಕರ ಹಿನ್ನೆಲೆಯನ್ನು ಪರಿಶೀಲಿಸಲಾಗಿದೆ. ಆದರೆ, ಅತಿಥಿ ಶಿಕ್ಷಕರ ಹಿನ್ನೆಲೆಯಲ್ಲಿ ಸಂಪೂರ್ಣ ಪರಿಶೀಲನೆ ಮಾಡಿಲ್ಲ ಎಂದು ಪೊಲೀಸರಿಗೆ ಆಡಳಿತ ಮಂಡಳಿ ತಿಳಿಸಿದೆ.
ನಾಲ್ವರು ಶಿಕ್ಷಕರನ್ನು ಖಾಸಗಿ ಏಜೆನ್ಸಿ ಮೂಲಕ ತೆಗೆದುಕೊಳ್ಳಲಾಗಿತ್ತು. ಖಾಸಗಿ ಏಜೆನ್ಸಿ ಶಿಕ್ಷಕರ ಹಿನ್ನೆಲೆ ಪರಿಶೀಲನೆಗೆ ತಂಡವನ್ನು ನಿಯೋಜಿಸಿಕೊಂಡಿದೆ. ಆದರೆ, ಅವರು ವೃತ್ತಿಪರವಾಗಿ ಸಂಪೂರ್ಣವಾಗಿ ಪೂರ್ವಪರ ಪರಿಶೀಲನೆ ನಡೆಸದೆ ವರದಿಯನ್ನು ಖಾಸಗಿ ಏಜೆನ್ಸಿಗೆ ನೀಡಿದ್ದರು. ಅದರಲ್ಲಿ ಶಿಫಾರಸು ಹಾಗೂ ಪೊಲೀಸ್ ಪರಿಶೀಲನೆ ಮಾತ್ರ ನಡೆಸಲಾಗಿದ್ದು ಅಪರಾಧ ಹಿನ್ನೆಲೆ ಪರಿಶೀಲಿಸಿಲ್ಲ.
ಹೀಗಾಗಿ, ಆತನ ಅಪರಾಧ ಹಿನ್ನೆಲೆ ಪರಿಶೀಲಿಸುವುದಾಗಿ ಡಿಸಿಪಿ ಹೇಳಿದರು. ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ ರೋಮಿಯೋ ಪರಪ್ಪನ ಅಗ್ರಹಾರದಲ್ಲಿರುವ ಶಾಲೆಗೆ ಸೇರುವ ಮುನ್ನ ಬೇರೆ ಶಾಲೆಗಳಲ್ಲೂ ಕರ್ತವ್ಯ ನಿರ್ವಹಿಸಿದ್ದ ಎಂದು ಗೊತ್ತಾಗಿದೆ. ಅದರ ಬಗ್ಗೆಯು ಪರಿಶೀಲನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.