ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಆಯೋಗವಿದೆ ಎಂಬುದು ಸಾಕಷ್ಟು ಪೊಲೀಸರಿಗೆ ಗೊತ್ತೇ ಇಲ್ಲವಂತೆ..! ಹೌದು. ಹೀಗೆಂದು ಬೇಸರ ವ್ಯಕ್ತಪಡಿಸಿದ್ದು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಮಂಜುಳಾ ಮಾನಸ.
ಪೊಲೀಸರಿಗೇ ಆಯೋಗ ಹಾಗೂ ಅದರ ಕಾರ್ಯವೈಖರಿ ಗೊತ್ತಿಲ್ಲವೆಂದರೆ ಇನ್ನು ಸಾಮಾನ್ಯರಿಗೆ, ಮಹಿಳೆಯರಿಗೆ ಹೇಗೆ ತಿಳಿಯಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯೋಗಕ್ಕೆ ಬಂದಿದ್ದ ದೂರೊಂದನ್ನು ಬಗೆಹರಿಸುವ ಹಾಗೂ ಆ ಬಗ್ಗೆ ಮಾಹಿತಿ ಪಡೆಯಲು ಸಿಲಿಕಾನ್ ಸಿಟಿಯ ಪೊಲೀಸ್ ಠಾಣೆಯೊಂದಕ್ಕೆ ಕರೆ ಮಾಡಿ ವಿಚಾರಣೆ ನಡೆಸಿದಾಗ ಆ ಠಾಣೆಯ ಪೊಲೀಸ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಾತನಾಡಿದ್ದಲ್ಲದೆ, ಆಯೋಗದ ಬಗ್ಗೆ ಗೊತ್ತೇ ಇಲ್ಲ ಎಂದು ಹೇಳಿದರು.
ನಂತರ ಅವರಿಗೆ ಮನವರಿಕೆ ಮಾಡಲಾಯಿತು ಎಂದು ವಿಷಾದಿಸಿದರು. ಎಫ್ಕೆಸಿಸಿಐ ಅಧ್ಯಕ್ಷ ಬಿ.ಅಮರ ನಾಥ್, ಉಪಾಧ್ಯಕ್ಷ ಎಂ.ಸಿ.ದಿನೇಶ್ ಉಪಸ್ಥಿತರಿದ್ದರು.