ಜಿಲ್ಲಾ ಸುದ್ದಿ

ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ

Manjula VN

ಬೆಂಗಳೂರು: ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎ. ಹುಸೇನ್ ತಿಳಿಸಿದರು.

ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳ ಜೊತೆಗಿನ ಪಾಲುದಾರಿಕೆಯಲ್ಲಿ ಪ್ರವಾಸೋದ್ಯಮ ಬೆಳೆಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಬಾರಿಯ ಬಜೆಟ್‍ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಐದು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

`ಕ್ಯಾರವಾನ್ ಟೂರಿಸಂ' ಈಗಾಗಲೇ ಆರಂಭವಾಗಿದ್ದು, ಪ್ರವಾಸಿಗರಿಗೆ ಎಲ್ಲ ರೀತಿಯ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯಲಿದೆ. ಮಂಡಳಿಯಿಂದ ಕ್ಯಾರವಾನ್ ಟೂರಿಸಂಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಸಿಗರ ಭದ್ರತೆ ವಿಚಾರದಲ್ಲಿ ರಾಜ್ಯ ಮುಂದಿದೆ ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಹೆಚ್ಚಿದೆ. ಸರ್ಕಾರಿ ಸೌಲಭ್ಯಗಳ ವಿಶ್ವಾಸಾರ್ಹತೆ ಹೆಚ್ಚಿರುವುದರಿಂದ ಪಿಪಿಪಿ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಂಡರೆ ಖಾಸಗಿ ಸಂಸ್ಥೆಗಳಿಗೂ ಅನುಕೂಲವಾಗಲಿದೆ.ಮಂಡಳಿಯನ್ನು ಫೈವ್‍ಸ್ಟಾರ್ ಹೋಟೆಲ್ ಗಳಿಗೆ ಹೋಲಿಸಬಾರದು.

ಫೈವಸ್ಟಾರ್ ಹೋಟೆಲ್‍ಗಳು ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಮಾತ್ರ ಕೆಲಸ ಮಾಡುತ್ತವೆ. ಆದರೆ, ಮಂಡಳಿಯಿಂದ ಕೈಗೊಳ್ಳುವ ಯೋಜನೆಗಳ ಉದ್ದೇಶ, ಜನರಿಗೆ ಪ್ರವಾಸಿ ತಾಣಗಳನ್ನು ಪರಿಚಯಿಸುವುದಷ್ಟೇ ಆಗಿದೆ. ಮಂಡಳಿಗೆ ಆದಾಯ ಅಗತ್ಯವಿದೆಯಾದರೂ ಲಾಭ ತರಲು ಯೋಜನೆ ರೂಪಿಸಿಲ್ಲ ಎಂದು ವಿವರಿಸಿದರು.

ರಾಜ್ಯದಲ್ಲಿ ರಸ್ತೆ ಸಂಪರ್ಕ ಅತ್ಯುತ್ತಮವಾಗಿದ್ದು, ಪ್ರವಾಸಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಸಹಾಯಕವಾಗಿದೆ. ಮಂಡಳಿಯ 28 ರೆಸಾರ್ಟ್ ಗಳು ರಾಜ್ಯದಲ್ಲಿದ್ದು, ಈ ಸಾಲಿನ ಯೋಜನೆಗಳಲ್ಲಿ ಪೂರ್ಣವಾಗಿ ಬಳಸಿಕೊಳ್ಳಲಾಗುವುದು ಎಂದರು.

ಎಫ್ ಕೆಸಿಸಿಐನ ಸದಸ್ಯರು ಮಂಡಳಿಗೆ ಬೇಡಿಕೆಗಳನ್ನು ಸಲ್ಲಿಸಿದರು. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‍ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು.ರಾಜ್ಯದ ಪ್ರವಾಸಿ ತಾಣಗಳ ಚಿತ್ರ ಪ್ರದರ್ಶನ ಹಾಗೂ ಸ್ಥಳೀಯ ಪ್ರದೇಶದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು.

ಮಂಡಳಿಯಲ್ಲಿ ಎಫ್ ಕೆಸಿಸಿಐ ಸದಸ್ಯರನ್ನು ಸಲಹೆಗಾರರನ್ನಾಗಿ ಸೇರ್ಪಡೆಗೊಳಿಸಬೇಕು ಎಂದು ಮನವಿ ಮಾಡಿದರು. ಎಫ್ಕೆಸಿಸಿಐ ಅಧ್ಯಕ್ಷ ತಲ್ಲಂ ಆರ್. ದ್ವಾರಕನಾಥ್, ಪ್ರವಾಸೋದ್ಯಮ ಸಮಿತಿ ಮುಖ್ಯಸ್ಥ ಪ್ರಕಾಶ್ ಮಂಡೋತ್ ಹಾಜರಿದ್ದರು.

SCROLL FOR NEXT