ಬೆಂಗಳೂರು: ನಗರದ ಹೋಟೆಲ್‍ಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡಿಸಬೇಕೆಂದು ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ ಅವರು ಹೋಟೆಲ್ ಸಂಘಕ್ಕೆ ಸೂಚಿಸಿದರು.
ಬೆಂಗಳೂರು ಹೋಟೆಲ್ ಅಸೋಸಿಯೇಷನ್, ನೋಬಲ್ ಎಕ್ಸ್ ಚೇಂಜ್ ಸಂಸ್ಥೆ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, ಹಸಿ ಕಸವನ್ನು ಯಾವ
ರೀತಿ ವಿಂಗಡಿಸಲಾಗುತ್ತಿದೆ ಹಾಗೂ ವಿಂಗಡಿಸಿದ ಕಸವನ್ನು ನೋಬಲ್ ಎಕ್ಸ್ ಚೇಂಜ್ ಸಂಸ್ಥೆಗೆ ನೀಡಲಾಗುತ್ತಿದೆಯಾ ಎಂಬುದರ ಬಗ್ಗೆ ಮಾಹಿತಿ ಪಡೆದರು.
ನೋಬಲ್ ಎಕ್ಸ್‍ಚೇಂಜ್ ಸಂಸ್ಥೆಯವರು ಸಮಯಕ್ಕೆ ಸರಿಯಾಗಿ ಕಸ ಸಂಗ್ರಹಿಸಲು ಬರುವುದಿಲ್ಲ ಎಂದು ಹೋಟೆಲ್ ಸಂಘದವರು ದೂರಿದರು. ಈ ವೇಳೆ ಮಾತನಾಡಿದ ಮೇಯರ್, ಹೋಟೆಲ್‍ಗಳಿಂದ ನಿತ್ಯ ನಿಗದಿತ ಸಮಯಕ್ಕೆ ತ್ಯಾಜ್ಯ ತೆಗೆದುಕೊಂಡು ಹೋಗಬೇಕು. ಯಾವುದಾದರೂ ಹೋಟೆಲ್‍ನವರು ಕಸ ವಿಂಗಡಣೆ ಮಾಡದಿದ್ದರೆ, ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಇದರಿಂದ ಸಂಸ್ಥೆ ಮೇಲೆ ಭರವಸೆ ಮೂಡಿಸಲಿದ್ದು, ಕಸ ವಿಲೇವಾರಿ ಸಮಸ್ಯೆ ಸಾಕಷ್ಟು ಬಗೆಹರಿಯಲಿದೆ ಎಂದು ಹೇಳಿದರು.
ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಮಾತನಾಡಿ, ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದ್ದು, ಅದರಂತೆ ಎಲ್ಲ ಹೋಟೆಲ್‍ಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮ ವಹಿಸಬೇಕು
ಎಂದರು. ಉಪಮೇಯರ್ ಹೇಮಲತಾ, ಪದ್ಮನಾಭರೆಡ್ಡಿ ಇದ್ದರು.