ಜಿಲ್ಲಾ ಸುದ್ದಿ

ಮಳೆ ನೀರು ಸಂಗ್ರಹಿಸದಿದ್ದರೆ ದಂಡ

Sumana Upadhyaya

ಬೆಂಗಳೂರು: ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದ ನಗರದ ನಿವಾಸಿಗಳಿಗೆ ಶೇ.25ರಿಂದ ಶೇ.50ರವರೆಗೂ ನೀರಿನ ಶುಲ್ಕ ಹೆಚ್ಚಿಸಿ ದಂಡ ವಿಧಿಸಲು ಸರ್ಕಾರಕ್ಕೆ  ಪ್ರಸ್ತಾವ  ಸಲ್ಲಿಸಲಾಗಿದೆ ಎಂದು  ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿ. ಎಂ. ವಿಜಯಭಾಸ್ಕರ್ ತಿಳಿಸಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ  ನಿರ್ದೇಶನಾಲಯ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣ ದಲ್ಲಿ ಆಯೋಜಿಸಿದ್ದ  `ನೀರು ಜೀವನಾಮೃತ ಪ್ರತಿ ಹನಿ ನೀರನ್ನು ಉಳಿಸಿ' ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಜಲಮಂಡಳಿಯಿಂದ ಪೂರೈಕೆಯಾಗುವ ಶೇ.50ರಷ್ಟು ಪ್ರಮಾಣದ ನೀರು   ಯಾವುದಕ್ಕೆ  ಬಳಕೆಯಾಗುತ್ತಿದೆ ಎಂಬ ಬಗ್ಗೆ ಲೆಕ್ಕ ದೊರೆಯುತ್ತಿಲ್ಲ. ಸೋರಿಕೆ ಹಾಗೂ ಅನಧಿಕೃತ ನೀರಿನ  ಸಂಪರ್ಕದಿಂದ ಜಲಮಂಡಳಿಗೆ ನಷ್ಟವಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಈ  ಪ್ರಮಾಣವನ್ನು  ಶೇ.30ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಕುಡಿಯುವ ನೀರಿನ ಕೊರತೆಯಾಗುವುದರಿಂದ ನೀರಿನ ಉಳಿತಾಯಕ್ಕೆ ಸಾರ್ವಜನಿಕರೂ ಸಹಕರಿಸಬೇಕಿದೆ. ಈ ಹಿಂದೆ   2009ರಲ್ಲಿ ಪ್ರತಿ ಮನೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಬೇಕು ಎಂದು   ಸೂಚಿಸಲಾಗಿತ್ತು.  ಈ ನಿಯಮದ  ಪ್ರಕಾರ 30-40 ವಿಸ್ತೀರ್ಣದ ಹೊಸ  ನಿವಾಸಗಳು, 60-40 ವಿಸ್ತೀರ್ಣದ 2009ಕ್ಕೂ ಮುನ್ನ ನಿರ್ಮಾಣರ್ವದ  ಮನೆಗಳು ಕಡ್ಡಾಯವಾಗಿ ಮಳೆ ನೀರು  ಕೊಯ್ಲು ವ್ಯವಸ್ಥೆ  ಮಾಡಿಕೊಳ್ಳಬೇಕಿತ್ತು.  2009ಕ್ಕಿಂತ ಹಿಂದೆ ನಿರ್ಮಾಣವಾದ ಮನೆಗಳಲ್ಲಿ ಸುಮಾರು 7,200  ಮನೆಗಳಲ್ಲಿ ಇನ್ನೂ ಮಳೆ ನೀರು ಕೊಯ್ಲು ವ್ಯವಸ್ಥೆ  ಮಾಡಿಲ್ಲ. ಹೀಗಾಗಿ ನೀರಿನ ಅಧಿಕ ಶುಲ್ಕ   ವಿಧಿಸುವ  ಮೂಲಕ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಈ ಪ್ರಸ್ತಾವ ಸರ್ಕಾರಕ್ಕೆ ಕಳುಹಿಸಲಾಗಿದೆ  ಎಂದರು.

ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಕ್ರಮ: ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಸದ್ಯ ಇರುವ   ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಜೊತೆಗೆ ಇನ್ನೂ 2 ಘಟಕಗಳನ್ನು ಆರಂಭಿಸಲಾಗುವುದು.  ಚಿಕ್ಕಬಳ್ಳಾಪುರ, ಆನೇಕಲ್, ಕೆಆರ್ ಪುರ, ಕೋಲಾರ ರೆಗಳಿಗೆ ಶುದ್ಧವಾದ ನೀರು ಹರಿಸಲು 1 ಸಾವಿರ ಕೋಟಿ ಮೊತ್ತದ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.  ಹೆಬ್ಬಾಳ, ಮಾದಾಪುರ ಹಾಗೂ ಯಲಹಂಕ ಕಣಿವೆಗಳಿಂದ ಹರಿಯುವ ಮಳೆ ನೀರು ಸಂಗ್ರಹಿಸಿ ಬಳಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ನೀರು ಬಳಕೆಗೆ ಯೋಗ್ಯವಾಗಿರುವುದರ ಬಗ್ಗೆ ಅಧ್ಯಯನ  ಡೆಯುತ್ತಿದ್ದು, ಫಲಿತಾಂಶ ಬಂದ ಬಳಿಕ ತೀರ್ಮಾನಿಸಲಾಗುವುದು ಎಂದರು. ಕಾನೂನು  ಸೇವೆಗಳ  ಪ್ರಾಧಿಕಾರದ ಅಧ್ಯಕ್ಷ ನ್ಯಾ. ಎನ್.ಕೆ. ಪಾಟೀಲ್ ಮಾತನಾಡಿ, ಬಿಡಿಎ ನಿರ್ವಹಣೆಯಲ್ಲಿರುವ 120  ಕೆರೆಗಳು, ಕೆರೆ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತಿರುವ 4 ಕೆರೆ ಹಾಗೂ ಅರಣ್ಯ ಇಲಾಖೆಗೆ  ಸೇರಿದ 2 ಕೆರೆಗಳು ಸೇರಿದಂತೆ ನಗರದ ಜಿಲ್ಲೆಯಲ್ಲಿ 386 ಕೆರೆಗಳಿವೆ. ಎಲ್ಲ ಕೆರೆಗಳನ್ನು ರಕ್ಷಿಸಿ  ಪುನಶ್ಚೇತನಗೊಳಿಸಿದರೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು. ನಗರದ  ಮಾತ್ರವಲ್ಲದೆ ರಾಜ್ಯದೆಲ್ಲೆಡೆ ನಲ್ಲಿ ನೀರಿಗೆ ಮೀಟರ್ ಅಳವಡಿಸಬೇಕು. ಕೆರೆಗಳ ಬಳಿ ತ್ಯಾಜ್ಯ ನೀರು ಶುದ್ಧೀಕರಣ  ಘಟಕಗಳನ್ನು ಆರಂಭಿಸಬೇಕು ಎಂದರು. 

SCROLL FOR NEXT