ಬೆಂಗಳೂರು: ಸುದ್ದಿ ವಾಹಿನಿಯಲ್ಲಿ ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಂಧಿತನಾಗಿರುವ ಚಿತ್ರನಟ ಹುಚ್ಚ ವೆಂಕಟ್ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ (ನ.23) ಮುಂದೂಡಿದೆ.
ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಸುದ್ದಿವಾಹಿನಿಯಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ವೆಂಕಟ್ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವೆಂಕಟ್‍ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಶನಿವಾರ ವೆಂಕಟ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಮತ್ತೊಂದು ಕೇಸ್: ಇದೇ ವೇಳೆ ಕೆಆರ್ ಪುರ ಪೊಲೀಸ್ ಠಾಣೆಯಲ್ಲೂ ಸಂಘಟನೆಯೊಂದು ದೂರು ದಾಖಲಿಸಿದ್ದು ಅದನ್ನು ಕೂಡಾ ಜ್ಞಾನಭಾರತಿ ಠಾಣೆಗೆ ವರ್ಗಾಯಿಸಲಾಗಿದೆ.
ಜೈಲಿನಲ್ಲಿ ಜೈಕಾರ
ಜೈಲಿನಲ್ಲಿರುವ ಹುಚ್ಚ ವೆಂಕಟ್‍ಗೆ ಅಭಿಮಾನಿಗಳಿದ್ದು ವೆಂಕಟ್ ನನ್ನು ಇರಿಸಿರುವ ಬ್ಯಾರಕ್‍ಗೆ ತೆರಳಿ ಕೈದಿಗಳು ಮಾತನಾಡಿಸುತ್ತಿದ್ದಾರೆ. ಅವರಿಗೆ ಊಟ ಕೊಡುವುದು, ಆರೋಗ್ಯ ವಿಚಾರಿಸುವುದು, ಮಾಡುತ್ತಿರುವ ಕೈದಿಗಳು, ಹೊಗಳಿಕೆಯ ಮಾತುಗಳನ್ನಾಡುತ್ತಿದ್ದಾರೆ ಎನ್ನಲಾಗಿದೆ. ಈ ವೇಳೆ ಕೈದಿಗಳ ಜತೆ ಮಾತನಾಡಿದ ವೆಂಕಟ್, ನಿಮ್ಮ ಜೈಲಿನ ಜೀವನ ಹಾಗೂ ಹೊರಗಿನ ಜೀವನದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಸಿನಿಮಾ ಮಾಡುತ್ತೇನೆಂದು ಹೇಳಿದ್ದಾನೆಂದು ತಿಳಿದುಬಂದಿದೆ.