ಜಿಲ್ಲಾ ಸುದ್ದಿ

ವಾಣಿವಿಲಾಸದ 8 ಬಾಣಂತಿಯರ ಸಾವು; ವೈದ್ಯರ ವಿರುದ್ಧ ತನಿಖೆ

Shilpa D

ಬೆಂಗಳೂರು: ನಗರದ ಪ್ರತಿಷ್ಠಿತ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕಳೆದ 10 ದಿನಗಳ ಹಿಂದೆ 8 ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರ ತನಿಖಾ ತಂಡ ರಚಿಸಲಾಗಿದೆ.

ತನಿಖಾ ತಂಡದಲ್ಲಿರುವ ಮೂವರು ವೈದ್ಯರೂ ಆಸ್ಪತ್ರೆಯ ವೈದ್ಯರಾಗಿದ್ದಾರೆ. ಹಾಗಾಗಿ ಇಲ್ಲಿ ನಡೆದಿರುವ ಅವ್ಯವಸ್ಥೆ ಹಾಗೂ ಬಾಣಂತಿಯರ ಸಾವಿನ ಕುರಿತು ಸತ್ಯಾಂಶ ಹೊರಬೀಳುವುದು ಹಾಗೂ ನಿಷ್ಪಾಕ್ಷಪಾತ ತನಿಖೆ ನಡೆಯುವುದು ತೀರಾ ಅನುಮಾನವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಸೋಂಕು ತಗುಲಿ ಈ ಘಟನೆ ನಡೆದಿದೆಯೇ? ರಕ್ತಸ್ರಾವ ತಡೆಗೆ ಬಳಸುವ ಚುಚ್ಚುಮದ್ದಿನಲ್ಲಿ ಲೋಪವಿರುವುದರಿಂದ ಸಾವು ಆಗಿವೆಯೇ ಎಂಬ ಯಾವುದೇ ಸತ್ಯ ಹೊರಬೀಳುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಈ ತನಿಖಾ ತಂಡದಿಂದ ಆಸ್ಪತ್ರೆಯಲ್ಲಿರುವ ಈ ಗಂಭೀರ ಸಮಸ್ಯೆಗೆ ಉತ್ತರ ಕಂಡುಕೊಳ್ಳುವುದು ಅಸಾಧ್ಯ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಹಲವು ಬಾಣಂತಿಯರು ಸಾವನ್ನಪ್ಪಿದ್ದರಿಂದ ರೋಗಿಗಳು ಆಸ್ಪತ್ರೆ ಸೇರಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಈ ಸಾವಿನ ಪ್ರಕರಣ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗಾಗಲೇ ಚಿಕಿತ್ಸೆಗೆ ದಾಖಲಾಗಿರುವ ಮಹಿಳೆಯೊಬ್ಬರ
ಸಂಬಂಧಿ ಕನ್ನಡಪ್ರಭ'ದೊಂದಿಗೆ ಮಾತನಾಡಿ, ತಮ್ಮ ಬಳಿ ಹಣವಿಲ್ಲದ ಕಾರಣ ಅನಿವಾರ್ಯವಾಗಿ ಆಸ್ಪತ್ರೆಗೆ ತಮ್ಮ ಮಗಳನ್ನು ದಾಖಲಿಸಲಾಗಿದೆ. ಬಾಣಂತಿ ಸಾವಿನ ಬಗ್ಗೆ ಈಗ ತಿಳಿಯಿತು. ಹಾಗಾಗಿ ಆ ಆಸ್ಪತ್ರೆಯಿಂದ ಹೋಗುವವರೆಗೂ ಆಕೆಗೆ ಯಾವುದೇ
ಅನಾಹುತ ಆಗದಿರಲಿ ಎಂದು ದೇವರಲ್ಲಿ  ಪ್ರಾರ್ಥಿಸುತ್ತಿದ್ದೇವೆ ಎಂದರು. ಅಂದರೆ ಇಲ್ಲಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹೀನಾಯವಾಗಿದೆ ಎಂಬುದು ಇದರಿಂದಲೇ ತಿಳಿದುಬರುತ್ತದೆ.

ಇಂಜೆಕ್ಷನ್ ಬದಲಿಗೆ ಸೂಚನೆ ಸಿಸೇರಿಯನ್ ವಿಭಾಗದಲ್ಲಿ ಬಾಣಂತಿಯರು ಮೃತಪಟ್ಟಿರುವ ಕಾರಣ ಅವರಿಗೆ ನೀಡುವ ಇಂಜೆಕ್ಷನ್  ಬದಲಿಸುವಂತೆ ಆಸ್ಪತ್ರೆ ಆಡಳಿತ ಮಂಡಳಿ ಸೂಚಿಸಿದೆ. ಹೆರಿಗೆ ನಂತರ ಆಗುವ ರಕ್ತಸ್ರಾವ ತಡೆಗೆ ಬಾಣಂತಿಯರಿಗೆ ಈಗ ಬಳಸುವ ಆಕ್ಸಿಟೋಸಿನ್ ಇಂಜೆಕ್ಷೆನ್ ಅನ್ನು ಮತ್ತೆ ಹೊಸದಾಗಿ ಖರೀದಿಸಿ ಬಳಸುವಂತೆ ಆದೇಶಿಸಿದೆ.

ಆಸ್ಪತ್ರೆಯ ಸಿಸೇರಿಯನ್ ಆಪರೇಷನ್ ಥಿಯೇಟರ್ ಅನ್ನು ನ.17 ರಿಂದ ಆಸ್ಪತ್ರೆಯ ಮೂರನೇ ಮಹಡಿಗೆ ವರ್ಗಾಯಿಸಲಾಗಿದ್ದು, ಸಾಮಾನ್ಯ ಶಸ್ತ್ರ ಚಿಕಿತ್ಸೆ ನಡೆಸುವ ಕೊಠಡಿಯಲ್ಲಿ (ನೆಲದಲ್ಲಿ) ನಡೆಸಲಾಗುತ್ತಿದೆ. ಕೊಠಡಿಯಲ್ಲಿನ ಕ್ರಿಮಿನಾಶಕಗಳು ಇದಕ್ಕೆ ಕಾರಣವೇ?
ಅಥವಾ ಆಯುಧಪೂಜೆ ಸಂದರ್ಭದಲ್ಲಿ ಸೋಂಕು ತಗುಲಿ ಸಾವು ಸಂಭವಿಸುತ್ತಿದೆಯೇ ಎಂಬ ಬಗ್ಗೆಯೂ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆ ಹಿನ್ನೆಲೆ
ವಾಣಿವಿಲಾಸ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ 8 ಬಾಣಂತಿಯರು ಮರಣ ಹೊಂದಿದ್ದು, ಅವರೆಲ್ಲ ಸರಿಸುಮಾರು 20 ರಿಂದ 28 ವರ್ಷದವರಾಗಿದ್ದಾರೆ.  ಎಲ್ಲ ಸಾವುಗಳು ಸಿಸೇರಿಯನ್ ವಿಭಾಗದಲ್ಲಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಗೆ ಇದೊಂದು ಗಂಭೀರ  ಸಮಸ್ಯೆಯಾಗಿ ಪರಿಣಮಿಸಿದೆ.

SCROLL FOR NEXT