ಜಿಲ್ಲಾ ಸುದ್ದಿ

ಸಾರಿಗೆ ಸಂಸ್ಥೆ ನೌಕರರ ಮೇಲೆ ಶೋಷಣೆ ನಷ್ಟ ತಗ್ಗಿಸಲು ನೌಕರರ ಮೇಲೆ ಒತ್ತಡ: ಆರೋಪ

Shilpa D

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ ನೌಕರರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ ಎಂದು ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಜಾನ್ ಡಿಸೋಜ ಆರೋಪಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿಯಲ್ಲಿ ಸಂಭವಿಸುತ್ತಿರುವ ನಷ್ಟ ತಗ್ಗಿಸಲು ನೌಕರರಿಗೆ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ. ಚಾಲಕ, ನಿರ್ವಾಹಕರಿಗೆ ಪೂರ್ಣ ಪ್ರಮಾಣದ ಸಂಬಳ ನೀಡದೆ, ಕೇವಲ ತರಬೇತಿ ಭತ್ಯೆ ನೀಡಿ ಶೋಷಿಸುತ್ತಿದ್ದಾರೆ.

ಹೀಗಾಗಿ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಪರಿಹಾರವೂ ಸಿಕ್ಕಿಲ್ಲ. ಸಂಸ್ಥೆ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ದಂಡದ ರೂಪದಲ್ಲಿ ನೌಕರರ ವೇತನದಲ್ಲಿ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ನೌಕರರ ಕುಟುಂಬ ನಿರ್ವಹಣೆ ಕಷ್ಟ ವಾಗಿದೆ ಎಂದರು. ಕೆಎಸ್‍ಆರ್‍ಟಿಸಿ ಸಂಸ್ಥೆ ನೌಕರ ರಾಮು ಎಂಬುವರಿಂದ ಸೇವೆ ಕಾಯಂಗೆ ಮೇಲಾ„ಕಾರಿಗಳು 20 ಸಾವಿರ ಲಂಚ ಕೇಳಿದ್ದರು. ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಸುಮಾರು 19 ವರ್ಷಗಳಿಂದ ಸೂಕ್ತ ಸಂಬಳ ನೀಡದೆ, ಕೇವಲ ತರಬೇತಿ ಭತ್ಯೆ ನೀಡಿ ವಂಚಿಸುತ್ತಿದ್ದಾರೆ.

ಅಲ್ಲದೆ, ನಕಲಿ ವರ್ಗಾವಣೆ ಪತ್ರ ಸಲ್ಲಿಸಲಾಗಿದೆ ಎಂದು ರಾಮು ವಿರುದ್ಧ ಸುಳ್ಳು ಆರೋಪಿಸಲಾಗಿದ್ದು, ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ತನಗಾದ ಅನ್ಯಾಯಕ್ಕೆ ನ.30ರಂದು ಸಂಸ್ಥೆ ಕೇಂದ್ರ ಕಚೇರಿ ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂಸ್ಥೆಗೆ ಪತ್ರ ಬರೆದಿದ್ದರು. ಈಗ ರಾಮು ನಾಪತ್ತೆಯಾಗಿದ್ದು, ಆತನಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂಘ ಪ್ರಯತ್ನಿಸುತ್ತಿದೆ. ನಾಪತ್ತೆಯಾದ ರಾಮು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಾರಿಗೆ ಸಂಸ್ಥೆ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

SCROLL FOR NEXT