ಜಿಲ್ಲಾ ಸುದ್ದಿ

ರಸ್ತೆ ಗುಂಡಿಗೆ ಯುವಕ ಬಲಿ

Sumana Upadhyaya

ಬೆಂಗಳೂರು: ನಗರದ ರಸ್ತೆ ಗುಂಡಿ ಮತ್ತೊಂದು ಬಲಿ ಪಡೆದಿದೆ. ಈ ಬಾರಿ ಬಲಿಯಾದ್ದು  ಮೈಸೂರಿನ ಯುವಕ.

ಹೌದು. ಮೈಸೂರು ರಸ್ತೆಯ ನಳಂದ ಥಿಯೇಟರ್ ಮೇಲ್ಸೇತುವೆ ಮೇಲೆ ಹೋಗುತ್ತಿದ್ದ ಯುವಕ  ರಸ್ತೆ ಮಧ್ಯದಲ್ಲಿದ್ದ ಗುಂಡಿಗೆ ಬಿದ್ದು ಅಸುನೀಗಿರುವ ಘಟನೆ ಸೆಂಟ್ರಲ್ ಸಂಚಾರ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.

ಮೈಸೂರಿನ ಇಟ್ಟಿಗೆ ಗೂಡು ನಿವಾಸಿ ಉಲ್ಲಾಸ್ (19) ಮೃತಪಟ್ಟ ಯುವಕ. ಹೋಟೆಲ್  ಮ್ಯಾನೇಜ್‍ಮೆಂಟ್ ಕೋರ್ಸ್ ಮುಗಿಸಿರುವ ಈತ, ಈ ಸಂಬಂಧವಾಗಿ ದೆಹಲಿಗೆ ತರಬೇತಿಗೆ  ತೆರಳಬೇಕಿತ್ತು. ಹೀಗಾಗಿ ಬೆಂಗಳೂರಿನಲ್ಲಿದ್ದ ಸ್ನೇಹಿತರನ್ನು ಕಾಣಲು ಆಗಮಿಸಿದ್ದ ಎಂದು  ಪೊಲೀಸರು ತಿಳಿಸಿದ್ದಾರೆ.

ಏನಾಯಿತು?: ಉಲ್ಲಾಸ್ ಬೆಳಗ್ಗೆ ಬೆಂಗಳೂರು ಬಂದಿದ್ದ. ಸ್ನೇಹಿತರನ್ನು ಕಂಡು ಸಂಜೆ ನಾಲ್ಕು  ಗಂಟೆಯ ಸುಮಾರಿಗೆ ಡಿಯೋ ಬೈಕ್‍ನಲ್ಲಿ ಮೈಸೂರಿಗೆ ಮರಳುತ್ತಿದ್ದ. ಈ ವೇಳೆ ನಳಂದ  ಥಿಯೇಟರ್  ಮೇಲ್ಸೇತುವೆ ಮೇಲೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿದ್ದ ಗುಂಡಿಗೆ ಆತನ ಬೈಕ್   ಢಿಕ್ಕಿ ಹೊಡೆದ ತಕ್ಷಣ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ  ಉಲ್ಲಾಸ್‍ನನ್ನು ಅಲ್ಲಿದ ಸಾರ್ವಜನಿಕರು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ,  ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವಕನನ್ನು ವಿಕ್ಟೋರಿಯಾಗೆ ಕೊಂಡೊಯ್ಯುವಂತೆ  ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ನಂತರ ಗಾಯಗೊಂಡ ಯುವಕನನ್ನು  ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ  ಅಲ್ಲಿಯೇ  ಮೃತಪಟ್ಟಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಇತ್ತೀಚೆಗೆ ನಗರದಲ್ಲಿ ಸುರಿದಿದ್ದ ಮಳೆಗೆ  ನಗರದ ಬಹುತೇಕ ರಸ್ತೆಗಳು ಮತ್ತಷ್ಟು ಗುಂಡಿಗಳಾಗಿದ್ದು, ಯಮಸ್ವರೂಪಿಯಾಗಿ ಮಾರ್ಪಾಡಾಗಿವೆ. ಈ ಹಿಂದೆ ಕೂಡ ರಸ್ತೆಯ ಗುಂಡಿಗಳಿಂದಾಗಿ ಇಬ್ಬರು ಬಲಿಯಾಗಿದ್ದರು.  ಆ  ಘಟನೆಗಳು ಮರೆಮಾಚುವ ಮುನ್ನವೇ ಮತ್ತೊಂದು ಘಟನೆ ಮರುಕಳಿಸಿದೆ.

ಮಳೆ ಎಡವಟ್ಟು
■ನಗರದಲ್ಲಿ ಸುರಿದ ಭಾರಿ
ಮಳೆಯಿಂದಾಗಿ ಉಂಟಾದ ರಸ್ತೆ ಗುಂಡಿಗಳು
■ ಮೈಸೂರು ರಸ್ತೆಯ ನಳಂದ
ಥಿಯೇಟರ್ ಮೇಲ್ಸೇತುವೆ ಮೇಲೆ
ನಡೆದ ಘಟನೆ
■ ಇನ್ನಾದರೂ ರಸ್ತೆಗಳಲ್ಲಿರುವ
ಯಮಸ್ವರೂಪಿ ಗುಂಡಿಗಳನ್ನು
ಮುಚ್ಚಲು ಮುಂದಾಗುವುದೇ ಸರ್ಕಾರ?

SCROLL FOR NEXT