ವಿಧಾನಪರಿಷತ್: ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಕೇರಳ ಹಾಗೂ ಇತರ ಕಡೆಯಿಂದ ಸುಮಾರು 5ರಿಂದ 6 ಸಾವಿರ ಜನ ಪಾಲ್ಗೊಂಡಿದ್ದರು ಎಂದು ಗೃಹ
ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಕಾನೂನು ವ್ಯವಸ್ಥೆ ಕುರಿತು ನಡೆದ ಚರ್ಚೆಗೆ ಲಿಖಿತ ಉತ್ತರ ಮಂಡಿಸಿದ ಗೃಹ ಸಚಿವ ಪರಮೇಶ್ವರ್, ಪ್ರಮುಖವಾಗಿ ಕೊಡಗು ಘಟನೆಯ ಹಿನ್ನೆಲೆಯನ್ನು ಅವರು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಟಿಪ್ಪು ಸುಲ್ತಾನ್ ಅಭಿಮಾನಿಗಳ ಸಂಘ, ಎಸ್‍ಡಿಪಿಐ, ಪಿಎಫ್ಐ ಕಾರ್ಯಕರ್ತರು ಸಹ ಮಡಿಕೇರಿಯ ಟಿಪ್ಪು ಜಯಂತಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆಂದು ವರದಿಯಲ್ಲಿ ಹೇಳಲಾಗಿದೆ.
ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಪ್ಪು ಪಟ್ಟಿ ಧರಿಸಿ ಹಿಂದೂಪರ ಸಂಘಟನೆಯ ಮುಖಂಡರು ಹಾಗೂ ಕಾರ್ಯ ಕರ್ತರು ಟಿಪ್ಪು ಜಯಂತಿಯ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕೆಲವರು ಕಲ್ಲು ತೂರಾಟ ನಡೆಸಿದಾಗ ಪರಿಸ್ಥಿತಿ ಹತೋಟಿಗೆ ತರಲು ನಿಷೇಧಾಜ್ಞೆ ಜಾರಿ ಮಾಡಿ. ಅಶ್ರುವಾಯು ಸಿಡಿಸಿ, ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಲಾಯಿತು ಎಂದು ಸದನಕ್ಕೆ ಮಾಹಿತಿ ನೀಡಲಾಗಿದೆ.
ಜಗದೀಶ್‍ಗೆ ಶೌರ್ಯ ಪ್ರಶಸ್ತಿಗೆ: ಶಿಫಾರಸು
ಕಳ್ಳರಿಂದ ಹತ್ಯೆಗೊಳಗಾದ ಕರ್ತವ್ಯ ನಿರತ ಸಬ್ ಇನ್‍ಸ್ಪೆಕ್ಟರ್ ಜಗದೀಶ್ ಅವರಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಲು ಸರ್ಕಾರ ನಿರ್ಧರಿಸಿದೆ. ಮೇಲ್ಮನೆಯಲ್ಲಿ ಗೃಹ ಸಚಿವರು ಮಂಡಿಸಿದ ಲಿಖಿತ ಉತ್ತರದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೊಲೆ ಬೇಧಿಸಿದ ಪೊಲೀಸ್ ತಂಡಕ್ಕೆ ರು.10 ಲಕ್ಷ ಬಹುಮಾನ ಘೋಷಿಸಲಾಗಿದೆ. ಮೃತರ ಕುಟುಂಬಕ್ಕೆ ರು.30 ಲಕ್ಷ ಪರಿಹಾರ ನೀಡಲಾಗಿದೆ. ಇನ್ನೂ ರು.20 ಲಕ್ಷ ಮೊತ್ತವನ್ನು ಸಮೂಹ ವಿಮಾ ಮಂಜೂರಾತಿಗಾಗಿ ವಿಮಾ ಕಂಪನಿಗೆ ಸಲ್ಲಿಸಲಾಗಿದೆ ಎಂದು ವಿವರಿಸಿದ್ದಾರೆ.