ಬೆಂಗಳೂರು: ಜೀವ ವಿಮೆ ಮಾಡಿಸಿಕೊಡುವುದಾಗಿ ಗ್ರಾಹಕರನ್ನು ನಂಬಿಸಿ ಲಕ್ಷಾಂತರ ಹಣ ಪಡೆದು ತಲೆಮರೆಸಿಕೊಂಡಿರುವ ಎಚ್‍ಡಿಎಫ್ ಸಿ ಜೀವ ವಿಮೆ ಶಾಖೆ ವ್ಯವಸ್ಥಾಪಕಿ ವಿಶಾಲಾಕ್ಷಿ ಭಟ್, ವಸತಿ ಸಚಿವ ಅಂಬರೀಷ ಅವರ ಪತ್ನಿ ಸುಮಲತಾ ಅವರ ಸಹೋದರಿಗೂ ರು.42 ಲಕ್ಷ ಪಡೆದು ವಂಚಿಸಿದ್ದಾರೆ.
ಚಿತ್ರನಟಿ ಸುಮಲತಾ ಅವರಿಗೆ ಸಂಬಂಧದಲ್ಲಿ ಸಹೋದರಿಯಾದ ರೇಣುಕಾದೇವಿ ಅವರಿಗೂ ವಿಶಾಲಾಕ್ಷಿ ಭಟ್ ವಂಚಿಸಿರುವ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶಾಲಕ್ಷಿ ಭಟ್ ಅವರಿಗೆ ರು.52 ಲಕ್ಷ ನೀಡಿದ್ದೆ. ಅದರಲ್ಲಿ ರು.10 ಲಕ್ಷ ವಾಪಸ್ ನೀಡಿದ್ದಾರೆ.
ಉಳಿದ ರು.42 ಲಕ್ಷ ನೀಡಬೇಕಿತ್ತು. ಆದರೆ, ಏಕಾಏಕಿ ಅವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ತಮ್ಮ ಹಣವನ್ನು ಕೊಡಿಸಿ ಎಂದು 15 ದಿನಗಳ ಹಿಂದೆ ದೂರು ದಾಖಲಿಸಿದ್ದಾರೆ. ವಿಶಾಲಾಕ್ಷಿ ವಿರುದ್ಧ ಮಡಿವಾಳ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ಆಕೆಗಾಗಿ ಹುಡುಕಾಟ ನಡೆದಿದೆ. ನಾವು ಕೂಡಾ ಶೋಧ ಕಾರ್ಯ ನಡೆಸಿದ್ದೇವೆಂದು ಪೊಲೀಸರು ಹೇಳಿದ್ದಾರೆ.
ನಾಪತ್ತೆ
ವಿಮೆ ಮಾಡಿಸಿಕೊಡುವುದಾಗಿ ರು.10 ಲಕ್ಷ ಪಡೆದು, ವಂಚಿಸಿದ್ದಾರೆಂದು ಶ್ರೀನಿವಾಸ್ ಎಂಬುವರು ಮಡಿವಾಳ ಠಾಣೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಶಿರಸಿ ಮೂಲದ ಅಪರ್ಣಾ ಹಂಸ ಎಂಬವರಿರೂ ರು.36 ಲಕ್ಷ ವಂಚಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರಕರಣಗಳು ದಾಖಲಾಗಿವೆ ಈ ಮೂಲಕ ಇದು ಬಹುಕೋಟಿ ವಂಚನೆ ಪ್ರಕರಣ ಎನ್ನಲಾಗಿದೆ.