ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 1.40 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಸಾಗಾಣೆ ಮಾಡಲಾಗುತ್ತಿದ್ದ ರು.36 ಲಕ್ಷ ಮೌಲ್ಯದ ಒಂದು ಕೆ.ಜಿ. 40 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಬೈನಿಂದ ವ್ಯಕ್ತಿಯೊಬ್ಬ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದಿಳಿದಿದ್ದಾನೆ. ಆತನ ನಡಾವಳಿ ಕಂಡ ಅಧಿಕಾರಿಗಳು ವಿಚಾರಿಸಿದಾಗ ಆತ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಾನೆ. ಕೂಡಲೇ ಆತನ ಲಗೇಜ್ ಗಳನ್ನು ತಪಾಸಣೆ ನಡೆಸಿದ ವೇಳೆ, ಬೆಳ್ಳಿ ಲೇಪನದ 3 ಚಿನ್ನದ ಗಟ್ಟಿ ಪತ್ತೆಯಾಗಿದೆ. ಇದನ್ನು ವೋಲ್ಟೇಜ್ ಕನ್ವರ್ಟರ್‌ವೊಂದರ ಮರೆಯಲ್ಲಿ ಅಡಗಿಸಿಟ್ಟಿದ್ದ. ಇದನ್ನು ಪರೀಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು 24 ಕ್ಯಾರೆಟ್ ಚಿನ್ನದ ಗಟ್ಟಿ ಎಂಬುದನ್ನು ದೃಢಪಡಿಸಿದರು.
ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಆರೋಪಿಯನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.