ಜಿಲ್ಲಾ ಸುದ್ದಿ

ವೆಂಟಿಲೇಟರ್ ಸಂಜೀವಿನಿ ಏನಲ್ಲ: ಖಾದರ್

Mainashree
ಬೆಂಗಳೂರು: ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಹೆಣ್ಣು ಮಗು ಸಾವಿಗೆ ವೆಂಟಿಲೇಟರ್ ಕಾರಣವಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. 
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆಯಿಂದ ಮಗು ಗಗನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ ಎನ್ನುವ ಮೂಲಕ ಆಸ್ಪತ್ರೆಗಳ ಕ್ರಮವನ್ನು ಸಚಿವರು ಸಮರ್ಥಿಸಿದ್ದಾರೆ. ಅಷ್ಟೇ ಅಲ್ಲ. ಮಗು ವೆಂಟಿಲೇಟರ್ ಕೊರತೆಯಿಂದ ಸತ್ತಿಲ್ಲ. ವೆಂಟಿಲೇಟರ್ ಎನ್ನುವುದು ಸಂಜೀವಿನಿ ಏನಲ್ಲ ಎಂದು ಹೇಳಿದ್ದಾರೆ. 
ಘಟನೆ ಸಂಭವಸಿದಾಗ ಮಗುವಿನ ಪೋಷರು ತಕ್ಷಣ 108 ಆ್ಯಂಬುಲೆನ್ಸ್ಗೆ ಕರೆ ಮಾಡಬೇಕಿತ್ತು. ಅದನ್ನು ಬಿಟ್ಟು ಖಾಸಗಿ ಆಸ್ಪತ್ರೆ ಮತ್ತು ನಿಮ್ಹಾನ್ಸ್ ಗೆ ಹೋಗಿ ನಂತರ ಇಂದಿರಾಗಾಂಧಿ ಆಸ್ಪತ್ರೆಗೆ ಹೋಗಿದ್ದಾರೆ. ಇಷ್ಟೆಲ್ಲಾ ಮಾಡುವ ಬದಲು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಅನ್ನುವ ಮೂಲಕ ಸಚಿವರು ಮಗುವಿನ ಪೋಷಕರದ್ದೇ ತಪ್ಪು ಎಂದು ಬಿಂಬಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. 
ಇಡೀ ಘಟನೆಗೆ ವೆಂಟಿಲೇಟರ್ ಕಾರಣವಲ್ಲ. ಆದರೂ ಆಸ್ಪತ್ರೆಗಳಲ್ಲಿ ಅಗತ್ಯ ವೆಂಟಿಲೇಟರ್ ಮತ್ತು ಹಾಸಿಗೆಗಳನ್ನು ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಖಾದರ್ ಹೇಳಿದ್ದಾರೆ. 
ಆಸ್ಪತ್ರೆ ತಪ್ಪಿಲ್ಲ: ಈ ಮಧ್ಯೆ ಘಟನೆ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕಿ ಡಾ.ಆಶಾ ಬೆನಕಪ್ಪ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪ್ರಕರಣದ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದ್ದಾರೆ. ಮಗು ಗಗನಾ ಸಾವಿಗೆ ಆಸ್ಪತ್ರೆಯಾಗಲಿ, ಅಲ್ಲಿನ ವೈದ್ಯರಾಗಲಿ ಯಾವುದೇ ರೀತಿಯಲ್ಲೂ ಕಾರಣವಲ್ಲ. ಬದಲಾಗಿ ಮಗು 2ನೇ ಮಹಡಿಯಿಂದ ಬಿದ್ದು ಮೆದುಳಿನಲ್ಲಿ ತೀವ್ರ ರಕ್ತ ಸ್ರಾವವಾಗಿದ್ದೇ ಕಾರಣ ಎಂದು ಹೇಳಿದ್ದಾರೆ. 
ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ 100 ರೋಗಿಗಳಿಗೆ 10 ವೆಂಟಿಲೇಟರ್‍ಗಳು ಇರಬೇಕು. ಅದರಂತೆ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ 9 ವೆಂಟಿಲೇಟರ್‍ಗಳಿವೆ. ಆದ್ದರಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದೆ ಮಗು ಸತ್ತಿಲ್ಲ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆಯೂ ಇಲ್ಲ ಎಂದು ಆಶಾ ಅವರು ವರದಿಯಲ್ಲಿ ಹೇಳಿದ್ದಾರೆ. 
ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ವೈದ್ಯಕೀಯ ಪ್ರಕ್ರಿಯೆಗಳನ್ನು ಮುಗಿಸಿ ಬೇರೆ ಮಗುವಿಗೆ ಹಾಕಿದ್ದ ವೆಂಟಿಲೇಟರ್ ನೀಡಲಾಗಿದೆ. ಆದರೂ ಮಗು ಬದುಕಿಲ್ಲ. ಅಂದರೆ ಮಗು ಮೆದುಳಿನಲ್ಲಿ ರಕ್ತ ಸ್ರಾವ ಆಗಿದ್ದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆಯಾಗಿತ್ತು. ಹೀಗಾಗಿ ಆಸ್ಪತ್ರೆ ತಪ್ಪಿಲ್ಲ. ವೈದ್ಯರ ನಿರ್ಲಕ್ಷ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
SCROLL FOR NEXT