ನಾಡಹಬ್ಬ ದಸರಾ ಉದ್ಘಾಟನೆ (ಕೃಪೆ: ಕೆಪಿಎನ್)
ಮೈಸೂರು: ನಾಲ್ಕು ಶತಮಾನಗಳ ಇತಿಹಾಸದ ಮೈಸೂರು ದಸರಾ ಮಂಗಳವಾರ ಇನ್ನೊಂದು ಇತಿಹಾಸ ಬರೆಯಿತು. ಇದೇ ಮೊದಲ ಬಾರಿಗೆ ಸಾಮಾನ್ಯ ರೈತರೊಬ್ಬರಿಗೆ ನಾಡಹಬ್ಬ ದಸರಾ ಉದ್ಘಾಟಿಸುವ ಗೌರವ ಸಂದಿತು. ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಹೆಗ್ಗಡದೇವನಕೋಟೆ ತಾಲೂಕು ಮಲಾರ ಕಾಲೋನಿಯ
ಪ್ರಗತಿಪರ ರೈತ ಪುಟ್ಟಯ್ಯ ಅವರು ಮಂಗಳವಾರ ಬೆಳಗ್ಗೆ 11.05 ರಿಂದ 11.55 ರೊಳಗಿನ ಶುಭ ಧನುರ್ ಲಗ್ನದಲ್ಲಿ ಚಾಮುಂಡೇಶ್ಚರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಹೊರಾವರಣದಲ್ಲಿ ನಿರ್ಮಿಸಿದ್ದ ವಿಶೇಷ ವೇದಿಕೆಯ ಲಾಗಿದ್ದ ದೇವಿಯ ಉತ್ಸವಮೂರ್ತಿ ಎದುರು ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ 405ನೇ ದಸರೆಗೆ ಅಧಿಕೃತ ಚಾಲನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಟಿ.ಬಿ. ಜಯಚಂದ್ರ, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವ ಪ್ರಸಾದ್, ಉಮಾಶ್ರೀ ಮೊದಲಾದವರು
ಅವರಿಗೆ ಸಾಥ್ ನೀಡಿದರು.ಕಳೆದ 44 ವರ್ಷಗಳಿಂದೀಚೆಗೆ ಮೊದಲ ಬಾರಿಗೆ ಭೀಕರವಾಗಿ ಕಾಣಿಸಿಕೊಂಡಿರುವ ಬರ ಮತ್ತು ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ
ಸರ್ಕಾರ ಅದ್ಧೂರಿ ದಸರೆ ಕೈಬಿಟ್ಟು, ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪ್ರಗತಿಪರ ರೈತನಿಂದ ದಸರಾ ಉದ್ಘಾಟಿಸಲಾಗಿದೆ. ವೇದಿಕೆಯ ಹಿನ್ನೆಲೆಯಲ್ಲಿ ಕೂಡ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಅಂಬಾರಿಯ ನಡುವೆ ಹೊಲದಲ್ಲಿ ಉಳುವ ಯೋಗಿ ಅನ್ನದಾತ ಮಿಂಚುತ್ತಿದ್ದ. ಆರಂಭದಲ್ಲಿ ನಾಡಗೀತೆಯ ಜೊತೆ ರೈತ ಗೀತೆ ಕೂಡ ಮೊಳಗಿತು.ನಂತರ ಯಾವುದೇ ಅಳುಕಿಲ್ಲದೇ ಪುಟ್ಟಯ್ಯ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.``ಶಕ್ತಿದೇವತೆ, ಅನ್ನದಾತೆ, ಪ್ರಕೃತಿಮಾತೆಗೆ ನನ್ನ ನಮಸ್ಕಾರ. 400 ವರ್ಷಗಳಿಂದ ದಸರಾ ಆಚರಿಸಿಕೊಂಡು ಬಂದಿರುವ ರಾಜಮನೆತನಕ್ಕೂ ನನ್ನ ನಮಸ್ಕಾರ. ಈ ಬಾರಿ ದಸರಾ ಹಬ್ಬ ಉದ್ಘಾಟನೆಗೆ ಸಾಮಾನ್ಯ ರೈತನಾದ ನನ್ನನ್ನು ಆಯ್ಕೆ ಮಾಡಿದ ಕರ್ನಾಟಕ ಸರ್ಕಾರಕ್ಕೂ ಧನ್ಯವಾದ...'' ಎಂದೇ ಮಾತು ಆರಂಭಿಸಿದ ಪುಟ್ಟಯ್ಯ, ``ರೈತ ಸಮೂಹ ಆತ್ಮಹತ್ಯೆಬಿಡಬೇಕು. ಉತ್ತಮ ಮಳೆಬೆಳೆಯಾಗಬೇಕು ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ. ರೈತರ ಸರಣಿ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿಯವರು ಬದುಕು- ಬೇಸಾಯ ಎಂಬ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿ ನನ್ನ ಅನುಭವವನ್ನು ಹಂಚಿಕೊಂಡಿದ್ದೆ. ನನಗೆ ಭಾಷಣ ಮಾಡಲು ಬರುವುದಿಲ್ಲ. ಅನುಭವವನ್ನುಹಂಚಿಕೊಳ್ಳುತ್ತೇನೆ'' ಎಂದರು. ``ನಮ್ಮಪ್ಪ ಜೀತಕ್ಕಿದ್ರು. 1967ರಲ್ಲಿ ಸರ್ಕಾರ ನಾಲ್ಕು ಎಕ್ರೆ ದರ್ಖಾಸ್ತು ಭೂಮಿ ಕೊಡ್ತು. ನಾನು ಕೂಡ ತಂದೆಗೆ ಸಾಥ್ ಕೊಡಬೇಕು ಎಂದುಕೊಂಡು ವ್ಯಾಸಂಗ ನಿಲ್ಲಿಸಿ, ಕೃಷಿಗಿಳಿದೆ. ಆಗ ಖುಷ್ಕಿ ಬೆಳೆ, ಜೀವನ ಕಷ್ಟ. 1966, 1976 ರಲ್ಲೂ ಬರ ಬಂದಿತ್ತು.ಆಗ ಏನ್ ಮಾಡ್ಬೇಕು ಅಂತಾ ಗೊತ್ತಾಗಲಿಲ್ಲ. ಈಗ ಆದ್ರೆ ಸರ್ಕಾರ ನೆರವು ನೀಡ್ತದೆ. ನೆಮ್ಮದಿಯ ಜೀವನ ಸಾಗಿಸಬಹ್ದು.
ನಾನು ಈವರೆಗೆ ಒಂದೇ ಒಂದು ರುಪಾಯಿ ಸಾಲ ಮಾಡಿಲ್ಲ. ನೀವೂ ಸಾಲ ಮಾಡಬೇಡಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಕೃಷಿಯನ್ನು ನೀರಾವರಿ, ತೋಟಗಾರಿಕೆ- ಹೀಗೆ ಹೆಂಗೆ ಬೇಕಾದ್ರು ಮಾಡಬಹುದು. ನಾನು ತರಬೇತಿ ಪಡೆದ ನಂತರ 8 ಪಂಪ್‍ಸೆಟ್ ಅಳವಡಿಸಿದೆ. ಡೇರಿ ಆರಂಬಿsಸಿದ್ದರಿಂದ ದಿನ ಆದಾಯ ಬರುತ್ತದೆ. ತರಕಾರಿ ಬೆಳೆಯುತ್ತಿರುವುದರಿಂದ 8 ದಿನಕ್ಕೊಮ್ಮೆ ಆದಾಯ ಬರುತ್ತದೆ. ರೇಷ್ಮೆ ಕೃಷಿಯಿಂದ ತಿಂಗಳಿಗೊಮ್ಮೆ, ತೆಂಗಿನಿಂದ ಮೂರು ತಿಂಗಳಿಗೊಮ್ಮೆ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳಿಂದ ಆರು ತಿಂಗಳಿಗೊಮ್ಮೆ, ಕಬ್ಬು, ಬಾಳೆ, ಶುಂಠಿ ಅರಿಶಿನದಿಂದ ವರ್ಷಕ್ಕೊಮ್ಮೆ ಆದಾಯ ಬರುತ್ತಿದೆ.
ಕುರಿ- ಮೇಕೆಯಿಂದ ವರ್ಷಕ್ಕೆ ಐದಾರು ಲಕ್ಷ ರು. ಆದಾಯ ಬರುತ್ತಿದೆ. ಈ ರೀತಿ ಕೃಷಿ ಮಾಡಿದ್ದರಿಂದಲೇ ನಾನೊಬ್ಬ ನಾಗರಿಕ ಎಂದು ತೋರಿಸಲು ಸಾಧ್ಯವಾಯಿತು. ರೈತರೆಲ್ಲಾ ಇತ್ತೀಚೆಗೆ ರೋಡ್ ಸೈಡ್‍ನಲ್ಲಿ ಬೆಳೆಗಳನ್ನು ಒಕ್ಕಣೆ ಮಾಡುತ್ತಿದ್ದಾರೆ. ಇದನ್ನು ಬಿಡಬೇಕು. ತಮ್ಮ ಜಮೀನಿನಲ್ಲಿ ಕಣ ಮಾಡುವುದು ದೊಡ್ಡ ಗೌರವ. ಅದು ಸಾಧ್ಯವಾಗದಿದ್ದಲ್ಲಿ ಸಾಮೂಹಿಕ ಕಣ ಮಾಡಿ.''
``ಕಬ್ಬು, ಬಾಳೆ ಅಂತ ಒಂದು ಬೆಳೆಗೆ ಅಂಟಿಕೊಳ್ಳುವ ಬದಲು ಸಮಗ್ರ ಕೃಷಿ ಪದ್ಧತಿ ಅನುಸರಿಸಿದರೆ ರೈತನ ಬದುಕು ಬಂಗಾರವಾಗುತ್ತ ದೆ. ಇದನ್ನು ಬಿಟ್ಟು ರೈತ ಬೇರೆ ದಾರಿ ಹಿಡಿಯಬಾರದು. ಆತ್ಮಹತ್ಯೆ ತಪ್ಪು ಕಲ್ಪನೆ. ದೇಶಕ್ಕೆ ಅನ್ನ ಹಾಕುವವನು ರೈತ, ಸ್ವಾಭಿಮಾನಿ ರೈತ, ಆತ್ಮಹತ್ಯೆ ಏಕೆ? ಆತ್ಮಹತ್ಯೆ ಕೆಟ್ಟ ಪ್ರವೃತ್ತಿ, ಮಕ್ಕಳು, ಮರಿ ಗತಿಯೇನು ಎಂದು ಒಂದು ಕ್ಷಣ ಯೋಚಿಸಿ. ನೀವು ಸತ್ತರೇ ನಿಮ್ಮ ಹೆಂಡ್ತಿ-ಮಕ್ಕಳಿಗೆ ಯಾರುಆಗ್ತಾರೆ'' ಎಂದು ಕಳಕಳಿಯಿಂದ ಪ್ರಶ್ನಿಸಿದರು.