ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಕಾಮಗಾರಿಗಳನ್ನು ಪಾಲಿಕೆಗೇ ವಹಿಸಬೇಕು. ಆದರೆ, ನಗರೋತ್ಥಾನ ಯೋಜನೆಯ ಅಡಿಯಲ್ಲಿ ಬರುವ ಕಾಮಗಾರಿಗಳನ್ನು ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಗೆ ನೀಡಿದೆ. ಆದ್ದರಿಂದ ಸರ್ಕಾರ, ಕಾಮಗಾರಿಯ ಅಂದಾಜನ್ನು ಟಿವಿಸಿಸಿ (ತಾಂತ್ರಿಕ ಕೋಶ) ವತಿಯಿಂದ ತಪಾಸಣೆ ಮಾಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16 ನೇ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿ ರಾಜ್ಯ ಸರ್ಕಾರ ಬಿಬಿಎಂಪಿಗೆ ರು.1,000 ಕೋಟಿ ನೀಡಿದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯ ರು.211 ಕೋಟಿ ವೆಚ್ಚದ ಕಾಮಗಾರಿಗಳನ್ನೂ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಆಡಳಿತಾಧಿಕಾರಿಗಳ ಅವಧಿಯಲ್ಲಿ ರು.342.42 ಕೋಟಿಯ 114 ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆಯಲಾಗಿತ್ತು. ಇದರಿಂದ ಸಂಶಯಗೊಂಡ ಆಡಳಿತಾಧಿಕಾರಿ 30 ಕಾಮಗಾರಿಗಳನ್ನು ಟಿವಿಸಿಸಿ ಮೂಲಕ ತಪಾಸಣೆ ಮಾಡಿಸಿದ್ದರು. ಆಗ, ರು.114 ಕೋಟಿ ಬದಲು ರು.50ಕೋಟಿಯಲ್ಲೇ ಕಾಮಗಾರಿ ಮಾಡಬಹುದು ಎಂಬ ವರದಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಕೂಡಲೇ ಎಲ್ಲ ಟೆಂಡರ್‍ಗಳನ್ನು ಸರ್ಕಾರ ಹಿಂಪಡೆದಿತ್ತು. ಈಗ ಮತ್ತೆ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಆರಂಭಕ್ಕೆ ಮುನ್ನ ಟಿವಿಸಿಸಿ ಮೂಲಕ ತಪಾಸಣೆ ನಡೆಸಬೇಕಾದ ಅಗತ್ಯವಿದೆ ಎಂದು ಒತ್ತಾಯಿಸಿದರು. ಕಾಮಗಾರಿಯಲ್ಲಿ ಲೋಕೋಪಯೋಗಿ ಇಲಾಖೆಗೆ ವಹಿಸಿರುವುದನ್ನು ನೋಡಿದೆ, ಇದರಲ್ಲಿ ಲಂಚ ಪಡೆದಿರುವುದು ಸ್ಪಷ್ಟವಾಗಿದೆ. ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ಸೇರಿ ಅಕ್ರಮ ನಡೆಸುತ್ತಿದೆ. ಹೀಗಾಗಿ ಕೌನ್ಸಿಲ್‍ನಲ್ಲಿ ವಿಶೇಷ ಸಭೆ ಕರೆದು ಶಾಸಕರು ಹಾಗೂ ಸದಸ್ಯರೊಂದಿಗೆ ಚರ್ಚಿಸಬೇಕು. ಮುಖ್ಯಮಂತ್ರಿಗಳು ಈ ವಿಚಾರವಾಗಿ ಬಿಬಿಎಂಪಿಗೆ ಹಾಗೂ ಸಾರ್ವಜನಿಕರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಮೇಯರ್ ಮೇಲೆ ನಂಬಿಕೆ ಇಲ್ಲವೇ: ನಗರಾಭಿವೃದ್ಧಿ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಡಿತದಲ್ಲೇ ಇದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ನ ಆಡಳಿತವೇ ಇದೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ತಮ್ಮದೇ ಪಕ್ಷದ ಆಡಳಿತದಲ್ಲಿ ನಂಬಿಕೆಯಿಲ್ಲದೆ ಮುಖ್ಯಮಂತ್ರಿಗಳು ಕಾಮಗಾರಿ ಯನ್ನು ಇಲಾಖೆಗೆ ನೀಡಿದ್ದಾರೆ. ಈ ಬಗ್ಗೆ ಮೇಯರ್ ಹಾಗೂ ಮುಖ್ಯಮಂತ್ರಿಗಳಿಗೆ
ಪತ್ರ ಬರೆದು ಸ್ಪಷ್ಟನೆ ಕೇಳುತ್ತೇನೆ.