ಬೆಂಗಳೂರು: ಸುಸ್ತಿ ಬಡ್ಡಿ ಮನ್ನಾ ಆಗಬೇಕೇ? ಹಾಗಿದ್ದರೆ ಇದೆ ಒಂದು ಷರತ್ತು. ಮುಂದಿನ ಮಾರ್ಚ್ ಒಳಗೆ ಅಸಲು ಪಾವತಿ ಮಾಡುವವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.ಹೀಗೆಂದು ಸಹಕಾರ ಸಚಿವ ಎಚ್. ಎಸ್ ಮಹಾದೇವ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಎಲ್ಲ ರೈತರಿಗೆ ಸರ್ಕಾರದ ಘೋಷಣೆಯ ಅನುಕೂಲ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಭೀಕರ ಬರ ಮತ್ತು ರೈತರ ಆತ್ಮಹತ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ಸುಸ್ತಿ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿದೆ.
2015 ಅ.31 ರ ವೇಳೆಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪಡೆದು ಸುಸ್ತಿ ದಾರರಾಗಿರುವ ರೈತರು ಸಾಲ ಪಾವತಿಸಬೇಕು. ಅದು ಮುಂದಿನ ವರ್ಷ ಮಾರ್ಚ್ 31ರ ಒಳಗೆ ಪಾವತಿಸಿದರೆ ಮಾತ್ರ ಅವರಿಗೆ ಈ ಸೌಲಭ್ಯ ಸಿಗುತ್ತದೆ. ಒಂದು ವೇಳೆ ರೈತರ ಆತ್ಮಹತ್ಯೆ ಹೆಚ್ಚಾಗಿ ಬರ ಪರಿಸ್ಥಿತಿ ಹೆಚ್ಚಾದರೂ ರೈತರು ಸಾಲದ ಹಣ ತುಂಬುವ ಅವಧಿಯನ್ನು ಮಾರ್ಚ್ ನಂತರ ಮತ್ತೆ ಮೂರು ತಿಂಗಳು ವಿಸ್ತರಿಸುವ ಚಿಂತನೆ ಮಾಡಲಾಗುತ್ತದೆ ಎಂದು ವಿವರಿಸಿದರು. ಸದ್ಯ ರಾಜ್ಯದಲ್ಲಿ ರೈತರಿಗೆ ರು.536 ಕೋಟಿ ಸುಸ್ತಿ ಸಾಲವಿದ್ದು, ಇದರ ಮೇಲೆ ರು. 220 ಕೋಟಿ ಬಡ್ಡಿ ಇದೆ.
ಇದನ್ನು ಬ್ಯಾಂಕ್‍ಗಳಿಗೆ ಸರ್ಕಾರವೇ ಕಟ್ಟಿಕೊಡಲಿದ್ದು, ಇದರಿಂದ 2.10 ಲಕ್ಷ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು. ಸರ್ಕಾರವೇ 136 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಹಿಂಗಾರು ಮಳೆ ಸಹ ಯಾವ ಭರವಸೆ ಮೂಡಿಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ರೈತರಿಗೆ ಮುಂದಿನ ಮುಂಗಾರು ಬೆಳೆಗಳ ತನಕ
ಯಾವುದೇ ಆದಾಯದ ಮೂಲಗಳು ಇರುವುದಿಲ್ಲ. ಹೀಗಾಗಿ ಅಸಲು ಪಾವತಿ ಹೇಗೆ ಸಾಧ್ಯ ಎಂಬುದೇ ಯಕ್ಷ ಪ್ರಶ್ನೆ.
ಕೃಷಿ ಕಾರ್ಮಿಕರಿಗೂ ಪ್ಯಾಕೇಜ್: ಸ್ವಂತ ಜಮೀನು ಹೊಂದಿರುವ ರೈತ ಆತ್ಮಹತ್ಯೆ ಮಾಡಿಕೊಂಡರೆ ಮಾತ್ರ ಪರಿಹಾರ ಸಿಗುತ್ತದೆ. ಆದರೆ ಅನೇಕ ರೈತರು ಸ್ವಂತ ಜಮೀನು ಹೊಂದಿಲ್ಲದೆ, ಗುತ್ತಿಗೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಸಾವಿಗೆ ಶರಣಾಗಿದ್ದರೆ ಅಂಥವರ ಕುಟುಂಬಕ್ಕೂ ಪರಿಹಾರ ನೀಡಲಾಗುವುದು. ಇದಕ್ಕಾಗಿ ಸರ್ಕಾರ ಪರಿಹಾರ ನೀಡಲು ಇರುವ ಮಾರ್ಗಸೂಚಿಗಳನ್ನೇ ಬದಲಿಸಲು ನಿರ್ಧರಿಸಿದೆ ಎಂದರು. ಆತ್ಮಹತ್ಯೆ ಮಾಡಿಕೊಂಡಿರುವ ರೈತರಪೈಕಿ ಕೆಲವರು ಸ್ವಂತ ಜಮೀನು ಹೊಂದಿಲ್ಲ ಮತ್ತು ರೈತರು ಎನ್ನುವುದಕ್ಕೆ ದಾಖಲೆಗಳಿಲ್ಲ. ಕೆಲ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖಾ ವರದಿಗಳು ಸಲ್ಲಿಕೆಯಾಗಿಲ್ಲ. ಎಸಿಗಳು ಒಪ್ಪಿಗೆ ನೀಡಿ ಪತ್ರ ಸಲ್ಲಿಸಿಲ್ಲ. ಆದ್ದರಿಂದ ಸದ್ಯಕ್ಕೆ 162 ಮಂದಿ ರೈತರ ಕುಟುಂಬಕ್ಕೆ ಮಾತ್ರ ಪರಿಹಾರದೊರೆಯುತ್ತಿದೆ. ಪರಿಹಾರ ಧನ ಈ ತನಕ ರು.2 ಲಕ್ಷ ಮಾತ್ರ ಇತ್ತು. ಇದನ್ನು ಈಗ ರು.5 ಲಕ್ಷ ಮಾಡಲಾಗಿದೆ.