ವಿ. ಭಾಸ್ಕರ್ - ಅಶ್ವಿನ್ ರಾವ್
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್ ಐಟಿ) ಅಧಿಕಾರಿಗಳು ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮೂರನೇ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಕೆಪಿಸಿಸಿ ಸದಸ್ಯ ಹಾಗೂ ಉದ್ಯಮಿ ಕೃಷ್ಣಮೂರ್ತಿ ಅವರು ಜಮೀನು ಮಾರಾಟ ಮಾಡಿ ಖಾತೆ ಮಾಡಿಸಿಕೊಡುವ ಸಂಬಂಧ ರು.10 ಲಕ್ಷ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಎಸ್‍ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದರು. 2015ರ ಆ.10ರಂದು ಕೃಷ್ಣಮೂರ್ತಿ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ 2,033 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದರು.
ಆರೋಪಿಗಳು: 3ನೇ ಪ್ರಕರಣದಲ್ಲಿ 6 ಮಂದಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದು 1ನೇ ಆರೋಪಿಯಾಗಿ ಲೋಕಾ ಯುಕ್ತರ ಪುತ್ರ ಅಶ್ವಿನ್ ರಾವ್, 2ನೇ ಆರೋಪಿ ವಿ. ಭಾಸ್ಕರ್, 3ನೇ ಆರೋಪಿಯಾಗಿ ಸಯ್ಯದ್ ರಿಯಾಜ್, 4ನೇ ಆರೋಪಿ ರಾಜಶೇಖರ್, 5 ಮತ್ತು 6ನೇ ಆರೋಪಿ ಗಳು ನರಸಿಂಹರಾವ್, ಸಾದಿಕ್ ಎಂದು ಹೆಸರಿಸಿದ್ದಾರೆ.
ಪಟ್ಟಿಯಲ್ಲೇನಿದೆ?: 2,033 ಪುಟದ ಆರೋಪ ಪಟ್ಟಿಯಲ್ಲಿ 64 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಸಾಕ್ಷಿಗಳಾಗಿ ಬಿಡಿಎ ಅಧಿಕಾರಿ, ಪೊಲೀಸ್ ಇನ್ಸ್‍ಪೆಕ್ಟರ್ ಮೀನಾಕ್ಷಿ ಹೇಳಿಕೆಗಳೂ ಇವೆ. ಅಶ್ವಿನ್ ರಾವ್‍ನ 3 ಬ್ಯಾಂಕ್ ಖಾತೆಗಳಿಗೆ ಕೃಷ್ಣಮೂರ್ತಿ ಹಣ ವರ್ಗಾವಣೆ ಮಾಡಿರುವ ದಾಖಲೆ, ಮೊಬೈಲ್ ಕರೆಯ ವಿವರ, ಜಾಮೀನು ಖಾತೆ ಮಾಡಿಸಿ ಕೊಡುವ ವಿಚಾರದಲ್ಲಿ ಹೋಟೆಲ್‍ವೊಂದರಲ್ಲಿ ಅಶ್ವಿನ್ ರಾವ್ ಜತೆ ಮಾತುಕತೆ, ವ್ಯವಹಾರ ನಡೆದಿರುವುದು ಸಹ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.