ಸಂಡೂರು: ಕೆಲದಿನಗಳ ಹಿಂದೆ ವ್ಯಕ್ತಿಯೊಬ್ಬರನ್ನು ಕೊಂದು ಹಾಕಿ ಭಯ ಹುಟ್ಟಿಸಿದ್ದ ಚಿರತೆ ಭಾನುವಾರ ಬೆಳಗಿನ ಜಾವದಲ್ಲಿ ಸುಶೀಲಾನಗರದ ಹೊರವಲದಲ್ಲಿರಿಸಿದ್ದ ಬೋನಿಗೆ ಬಿದ್ದಿದೆ.
ಮಾಬುಸಾಬ್ ಎನ್ನುವ ದನಗಾಹಿಯ ಪ್ರಾಣ ತೆಗೆದಿದ್ದ ಚಿರತೆಯ ಉಪಟಳಕ್ಕೆ ಸಾರ್ವಜನಿಕರು ಭೀತರಾಗಿದ್ದರು. ಘಟನೆ ದಿನ ಜನರು ಹೊಲಗೆಲಸಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ತಹಸೀಲ್ದಾರ್ ಸೇರಿದಂತೆ ಅರಣ್ಯ ಇಲಾಖೆಯವರ ವಿರುದಟಛಿ ಪ್ರತಿಭಟನೆಗಳು ಜರುಗಿದ್ದವು.
ಪರಿಸ್ಥಿತಿಯ ಗಂಭೀರತೆ ಅರಿತು ಎಚ್ಚೆತ್ತ ಇಲಾಖೆ ಕಬ್ಬಿಣದ ಬೋನೊಂದನ್ನು ಗ್ರಾಮದ ಹೊರವಲಯದಲ್ಲಿಟ್ಟು, ನಾಯಿ ಬಿಟ್ಟಿದ್ದರು. ಎರಡು ದಿನಗಳಿಂದ ಇದೇ ಸ್ಥಳಕ್ಕೆ ಚಿರತೆ ಬಂದಿದ್ದರೂ ಬೋನಿಗೆ ಹೊಕ್ಕಿರಲಿಲ್ಲ. ಭಾನುವಾರ ಬೋನಿಗೆ ಬಿದ್ದ ವಿಷಯವನ್ನು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ವಾಹನದಲ್ಲಿ ಹೊಸಪೇಟೆ ಬಳಿಯ ಗುಂಡಾ ಅರಣ್ಯದಲ್ಲಿರುವ ಗೆಸ್ಟ್‍ಹೌಸ್‍ಗೆ ಸಾಗಿಸಿದರು. ಬನ್ನೇರುಘಟ್ಟ ಅಥವಾ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಸಾಗಿಸುವ ಸಾಧ್ಯತೆಯಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ನಿರ್ದೇಶನ ಬಂದ ಆನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಉಮೇಶ್ ತಿಳಿಸಿದರು.