ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಸಂದರ್ಭದಲ್ಲಿ ಶಾಸಕ ರಮೇಶ್ ಕುಮಾರ್ ನೇತೃತ್ವದ ಪಂಚಾಯಿತಿ ಸುಧಾರಣೆ ವರದಿ ಜಾರಿಗೆ ತರುವುದಾಗಿ ಘೋಷಿಸಿದ್ದ ಸರ್ಕಾರ ಕೆಲವೇ ದಿನದಲ್ಲಿ ಮಾತು ಮರೆತಿದ್ದು, ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮತ್ತೆ ಪರಿಶೀಲನೆಗೆ ಒಳಪಡಿಸಲು ನಿರ್ಧರಿಸದೆ.
ವರದಿ ಬಗ್ಗೆಯೇ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದಿದೆ. ಆದರೆ ಜಾರಿ ಮಾಡಿದರೆ ಹಲವು ವಾಸ್ತವ ತೊಡಕುಗಳಿವೆ. ವರದಿಯ ತತ್ವಾದರ್ಶಕಗಳು ಕೇಳುವುದಕ್ಕೆ ಚಂದ ಎಂಬ ಮಾತುಗಳು ಸಂಪುಟ ಸಭೆಯಲ್ಲಿ ವ್ಯಕ್ತವಾಗಿದೆ. ಜತೆಗೆ ವರದಿ ಬಗ್ಗೆ ಮರು ಪರಿಶೀಲನೆ ನಡೆಸುವುದಕ್ಕೆ ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ , ಕಾನೂನು ಸಚಿವ ಟಿ.ಬಿ.ಜಯಚಂದ್ರ, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಅಲ್ಲಿಗೆ ವರದಿ ಅನುಷ್ಠಾನ ಸದ್ಯಕ್ಕೆ ಇಲ್ಲ ಎಂಬ ಮುನ್ಸೂಚನೆ ಲಭಿಸಿದೆ. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಹೇಳುವುದಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆಯೋಸಿದ್ದ ಪಂಚಾಯಿತ್ ರಾಜ್ ಸಮಾವೇಶ ಸಂದರ್ಭದಲ್ಲಿ ಪಂಚಾಯಿತ್ ಪ್ರತಿನಿಧಿಗಳು ಈ ವರದಿ ಅನುಷ್ಠಾನಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ವರದಿ ಜಾರಿಗೆ ತರುವಂತೆ ರಾಹುಲ್ ಗಾಂಧಿ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದರು. ಆದರೆ ಸಂಪುಟದ ನಿರ್ಧಾರ ಬೇರೆಯದೇ ಆಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಈ ಬಗ್ಗೆ ವಿಸ್ತೃತ ಚರ್ಚೆಯಾಗಿದೆ. ಸುಮಾರು 88 ತಿದ್ದುಪಡಿಗಳ ಅಗತ್ಯವಿದೆ. ಹೊಸ ಸಲಹೆ- ಸೂಚನೆಗಳು ಬಂದಿವೆ. ಹೀಗಾಗಿ ಪುನರ್ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ನವೆಂಬರ್ 16ರಿಂದ 27ರವರೆಗೆ ರಾಜ್ಯ ವಿಧಾನ ಮಂಡಲ ಅಧಿವೇಶನ ಕರೆಯಲು ನಿರ್ಧರಿಸಲಾಗಿದ್ದು, ಅಧಿವೇಶನ ಸಂದರ್ಭದಲ್ಲಿ ವಿಧೇಯಕ ಮಂಡನೆ ಮಾಡಲಾಗುವುದು. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವ್ಯಾಪಾರ ಪರವಾನಗಿ ನೀಡುವ ಪದಟಛಿತಿ ರದ್ದುಗೊಳಿ ಸಬೇಕೆಂಬ ಉದ್ಯಮಿಗಳ ಬಹುದಿನದ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಪುರಸಭೆ ಮತ್ತು ಪೌರ ನಿಗಮ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ತಿದ್ದುಪಡಿ ಪ್ರಕಾರ ಇನ್ನು ಮುಂದೆ ಪುರಸಭೆ ವ್ಯಾಪ್ತಿಯಲ್ಲಿ ಸಣ್ಣ ಮತ್ತು
ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ವಾಣಿಜ್ಯ ಪರವಾನಗಿ ವಿನಾಯಿತಿ ನೀಡಲಾಗುತ್ತದೆ.
ನ.17 ರಿಂದ ಅಧಿವೇಶನ
ನವೆಂಬರ್ 17ರಂದು 26ವರೆಗೆ ವಿಧಾನ ಮಂಡಲ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಚಳಿಗಾಲದ ಅಧಿವೇಶನ ನಡೆಸಬೇಕಾಗುತ್ತದೆ. ಆದರೆ ಈ ಬಾರಿ ಜನವರಿ 5ರೊಳಗಾಗಿ ವಿಧಾನ ಪರಿಷತ್ ಚುನಾವಣೆ ನಡೆಸಬೇಕಾಗಿದೆ. ಹೀಗಾಗಿ ಮುಂಚಿತವಾಗಿ ಅಧಿವೇಶನ ಕರೆಯಲಾಗಿದೆ ಎಂದು ವಿವರಣೆ ನೀಡಿದರು.