ಬೆಂಗಳೂರು: ದೊಡ್ಡಬಳ್ಳಾಪುರ ಪಟ್ಟಣ ಎಸ್.ಐ ಜಗದೀಶ್ ರನ್ನು ಹತ್ಯೆಗೈದ ನಂತರ ಹರೀಶ್ ಬಾಬು ಹಾಗೂ ಮಧು ಪಾಪ ಕಳೆದುಕೊಳ್ಳಲೆಂದು ಮಂತ್ರಾಲಯಕ್ಕೆ ತೆರಳಿದ್ದರು. ಅಲ್ಲಿ ದೇವರಿಗೆ ಮುಡಿ ಸಮರ್ಪಿಸಿ ಅಲ್ಲಿಂದ ಬೇರೆಡೆಗೆ ತೆರಳಿದ್ದರು.
ಕೊಲೆ ನಂತರ ಹಂತಕರು ತೆರಳಿದ್ದ ಸ್ಥಳದಲ್ಲೆಲ್ಲ ಮಹಜರ್ ಮಾಡಲೆಂದು ಪೊಲೀಸರು ಇಬ್ಬರನ್ನೂ ಮಂತ್ರಾಲಯ ಮತ್ತು ಕರ್ನೂಲಿಗೆ ಕರೆದೊಯ್ದಿದ್ದಾರೆ. ಮಹಜರ್ ಕಾರ್ಯ ಪೂರ್ಣಗೊಂಡಿದ್ದು ಸೋಮವಾರ ಹಂತಕರನ್ನು ಪೊಲೀಸರು ಬೆಂಗಳೂರಿಗೆ ವಾಪಸ್ ಕರೆತರಲಿದ್ದಾರೆ.
ಅ.16 ರಂದು ಎಸ್.ಐ ಜಗದೀಶ್ ಹತ್ಯೆ ಬಳಿಕ ಆರೋಪಿಗಳು ಮಂತ್ರಾಲಯಕ್ಕೆ ಹೋಗಿದ್ದರು. ಹರೀಶ್ ಬಾಬು ತನ್ನ ಗುರುತು ಮರೆಮಾಚಲು ಹಾಗೂ ಪಾಪ ಪ್ರಾಯಶ್ಚಿತ್ತವೆಂದು ಮುಡಿ ಕೊಟ್ಟಿದ್ದ. ಅ.17 ರಂದು ರಾತ್ರಿ ಲಾಡ್ಜ್ ನಲ್ಲಿ ಉಳಿದುಕೊಂಡು ಮರುದಿನ ಅಲ್ಲಿಂದ ಹೊರಟುಹೋಗಿದ್ದಾಗಿ ಆರೋಪಿಗಳು ಹೇಳಿದ್ದರು.
ಆರೋಪಿಗಳು ಉಳಿದುಕೊಂಡಿದ್ದ ಕರ್ನೂಲ್ ನ ಹನುಮಂತರಾಮು ಮನೆ, ಮಂತ್ರಾಲಯದಲ್ಲಿನ ಲಾಡ್ಜ್ ಕೊಠಡಿಗಳನ್ನು ಮಹಜರು ಮಾಡಿ ಮಾಹಿತಿ ಸಂಗ್ರಹಿಸಲಾಯಿತು. ಎಸ್.ಐ ಜಗದೀಶ್ ಹತ್ಯೆಗೆ ಬಳಸಲಾಗಿದ್ದ ಡ್ರ್ಯಾಗರ್, ಪಿಸ್ತೂಲ್ ಹಾಗೂ ಕೊಲೆ ದಿನ ಧರಿಸಿದ್ದ ರಕ್ತ ಸಿಕ್ತ ಬಟ್ಟೆಗಳು ಈಗಾಗಲೇ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದ್ದಾರೆ.